ನವದೆಹಲಿ, ಡಿ. 29 (DaijiworldNews/MB) : ಅಂತರರಾಷ್ಟ್ರೀಯ ಶೂಟರ್ ಖ್ಯಾತಿಯ ವರ್ತಿಕಾ ಸಿಂಗ್ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ದ ಭ್ರಷ್ಟಾಚಾರ ಆರೋಪಗೈದ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.
ಅಂತರರಾಷ್ಟ್ರೀಯ ಶೂಟರ್ ಖ್ಯಾತಿಯ ವರ್ತಿಕಾ ಸಿಂಗ್ ಅವರು ಕೇಂದ್ರ ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಕ ಮಾಡಲು ಕೇಂದ್ರ ಜವಳಿ ಖಾತೆ ಸಚಿವರು ಹಾಗೂ ಮತ್ತಿಬ್ಬರು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಉತ್ತರ ಪ್ರದೇಶದ ಸುಲ್ತಾನಪುರದ ಜನಪ್ರತಿನಿಧಿಗಳ ನ್ಯಾಯಾಲಯವು ಜನವರಿ 2 ಕ್ಕೆ ನಿಗದಿಪಡಿಸಿದ್ದು ಈ ಪ್ರಕರಣ ತನ್ನ ವ್ಯಾಪ್ತಿಗೆ ಬರುತ್ತದೆಯೇ ಎಂದು ಕೂಡಾ ನಿರ್ಧರಿಸಲಾಗುವುದು ಎಂದು ತಿಳಿಸಿತ್ತು.
ಈ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗೋಷ್ಠಿ ನಡೆಸಿದ ಕಾಂಗ್ರೆಸ್ನ ಪ್ರಧಾನ ವಕ್ತಾರ ರಣ್ದೀಪ್ ಸುರ್ಜೇವಾಲಾ, ''ಸ್ಮೃತಿ ಇರಾನಿ ವಿರುದ್ಧದ ಈ ಆರೋಪ ಬಹಳ ಗಂಭೀರವಾದದ್ದು. ಹಾಗಾಗಿ ತಪ್ಪತಸ್ಥರಿಗೆ ಶಿಕ್ಷೆ ಆಗಲೇಬೇಕು. ಪ್ರಧಾನಮಂತ್ರಿ ನರೇಂದ್ರಮೋದಿ, ಪ್ರಕರಣ ಕುರಿತಂತೆ ಸ್ವತಂತ್ರ ನ್ಯಾಯಾಂಗ ತನಿಖೆಗೆ ಆದೇಶಬೇಕು'' ಎಂದು ಆಗ್ರಹಿಸಿದ್ದಾರೆ.
''ಒಬ್ಬ ಅಂತರರಾಷ್ಟ್ರೀಯ ಶೂಟರ್ ಈ ಗಂಭೀರ ಆರೋಪ ಮಾಡಿದರೂ ಈ ಕುರಿತಾಗಿ ಮೋದಿ ಯಾಕೆ ಸ್ವತಂತ್ರ ತನಿಖೆಗೆ ಆದೇಶಿಸಿಲ್ಲ'' ಎಂದು ಪ್ರಶ್ನಿಸಿದರು.
ಹಾಗೆಯೇ, ''ಒಂದು ವೇಳೆ ಯುಪಿಎ ಸರ್ಕಾರವಿದ್ದಾಗ ನಮ್ಮ ಸಚಿವರ ಮೇಲೆ ಇಂತಹ ಆರೋಪ ಕೇಳಿಬಂದಿದ್ದರೆ ಇರಾನಿಯವರೇ ಕಾಂಗ್ರೆಸ್ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದರು. ಈಗ ಅವರ ವಿರುದ್ದ ಗಂಭೀರ ಆರೋಪವಿರುವ ಹಿನ್ನೆಲೆ ಸ್ಮೃತಿ ಇರಾನಿ ರಾಜೀನಾಮೆ ಕೊಟ್ಟು ಸ್ವತಂತ್ರ ತನಿಖೆ ಎದುರಿಸಬೇಕು ಪ್ರಧಾನಿ ಕೂಡಾ ಇರಾನಿಗೆ ರಾಜೀನಾಮೆ ನೀಡುವಂತೆ ಹೇಳಬೇಕು'' ಎಂದು ಒತ್ತಾಯಿಸಿದ್ದಾರೆ.