ಬೆಂಗಳೂರು, ಡಿ. 28(DaijiworldNews/SM): ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದ ನೈಟ್ ಕರ್ಫ್ಯೂ ಪ್ರಸ್ತಾಪವನ್ನು ಇದೀಗ ಹೊಸ ವರ್ಷಾಚರಣೆ ಸಂದರ್ಭದಲ್ಲೂ ಕೈ ಬಿಡಲಾಗಿದ್ದು, ಹೊಸ ವರ್ಷಾಚರಣೆ ಸಂದರ್ಭದಲ್ಲಿ ನೈಟ್ ಕರ್ಫ್ಯೂ ಇಲ್ಲ ಎಂಬುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನೈಟ್ ಕರ್ಫ್ಯೂ ಪ್ರಸ್ತಾವಣೆ ಸರಕಾರದ ಮುಂದಿಲ್ಲ. ಹಾಗಂತ, ಬಹಿರಂಗ ಆಚರಣೆಗೂ ಕೂಡ ರಾಜ್ಯದಲ್ಲಿ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಸಭೆ ಬಳಿಕ ಮಾತನಾಡಿದ ಅವರು, ಹೊಸ ವರ್ಷಾಚರಣೆ ಸಂಬಂಧ ಆರೋಗ್ಯಾಧಿಕಾರಿ, ಪೊಲೀಸ್ ಅಧಿಕಾರಿ ಜೊತೆ ಸಭೆ ನಡೆಸಿದ್ದೇವೆ. ಡಿ.17ರಂದು ಹೊರಡಿಸಿರುವ ಮಾರ್ಗಸೂಚಿಗೆ ಕೆಲ ಮಾರ್ಪಾಡು ಮಾಡಿ ಅಂತಿಮ ಮಾರ್ಗಸೂಚಿ ಹೊರಡಿಸುತ್ತೇವೆ. ನಗರ ಪೊಲೀಸ್ ಆಯುಕ್ತರು ಬೆಂಗಳೂರಿಗೆ ಸೀಮಿತವಾಗಿ ಮಾರ್ಗಸೂಚಿ ಹೊರಡಿಸಲಿದ್ದಾರೆ ಎಂದರು.
ಇನ್ನುಳಿದಂತೆ ರೆಸಾರ್ಟ್ ಗಳಲ್ಲಿ ಹೊಸ ವರ್ಷಾಚರಣೆಗೆ ನಿಷೇಧ ಇರಲಿದೆ. ಮ್ಯೂಸಿಕ್, ಬ್ಯಾಂಡ್ ಬಳಕೆ ನಿಷೇಧಿಸಲಾಗಿದೆ. ಸಾರ್ವಜನಿಕ ಬಹಿರಂಗ ಆಚರಣೆಯನ್ನು ನಿಷೇಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.