ಬೆಂಗಳೂರು, ಡಿ. 28 (DaijiworldNews/MB) : ''ನಿಮ್ಮ ತಂದೆ ದೇವೇಗೌಡರನ್ನು ಪ್ರಧಾನಿ ನಿಮ್ಮನ್ನು ಎರಡನೇ ಬಾರಿ ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ನನ್ನ ಬಗ್ಗೆ ಮಾತನಾಡಿ ಆದರೆ ಕಾಂಗ್ರೆಸ್ ಪಕ್ಷದ ಧ್ವಜದ ಬಗ್ಗೆ ಮಾತನಾಡುವುದು ಬೇಡ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದರು.
ಸೋಮವಾರ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್ 136 ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಹಿಂದೆ ಹೆಚ್ಡಿ ಕುಮಾರಸ್ವಾಮಿಯವರು, ''ಕಾಂಗ್ರೆಸ್ ಧ್ವಜದ ಬೆಲೆ ಹೋಗಿದೆ. ಆದ್ದರಿಂದ ಅವರು ಹಸಿರು ಶಾಲು ಹಾಕುತ್ತಾರೆ'' ಎಂದು ಹೇಳಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ''ನಮ್ಮ ಬಗ್ಗೆ ಏನು ಬೇಕಾದರೂ ಮಾತನಾಡಿ. ಆದರೆ ಪಕ್ಷದ ಧ್ವಜದ ಬಗ್ಗೆ ಮಾತನಾಡುವುದು ಬೇಡ'' ಎಂದು ಸಿಡಿಮಿಡಿಗೊಂಡರು.
''ಇದು ಕಾಂಗ್ರೆಸ್ಗೆ ಐತಿಹಾಸಿಕ ದಿನವಾಗಿದೆ. ಈ ಪವಿತ್ರವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಪುಣ್ಯ'' ಎಂದು ಹೇಳಿದ ಅವರು, ''ಹಲವು ಬುದ್ದಿವಂತರು ಸೇರಿ ಕಾಂಗ್ರೆಸ್ ಸ್ಥಾಪನೆ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ತ್ರಿವರ್ಣ ಧ್ವಜವನ್ನು ಹಾಕಿಕೊಳ್ಳುವ ಭಾಗ್ಯವಿದೆ'' ಎಂದು ಹೇಳಿದರು.