ಬೆಂಗಳೂರು, ಡಿ. 28 (DaijiworldNews/MB) : ''ನಾನು ದನದ ಮಾಂಸ ತಿನ್ನುತ್ತೇನೆ, ಆಹಾರ ಪದ್ಧತಿ ನನ್ನ ಹಕ್ಕು, ನೀವ್ಯಾರು ಕೇಳೋಕೆ ಎಂದು ನಾನು ಅಧಿವೇಶನದಲ್ಲೂ ಕೇಳಿದ್ದೇನೆ'' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್ 136 ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
''ನಾವು 1964ರಲ್ಲಿ ಗೋ ಹತ್ಯೆ ನಿಷೇಧ ಕಾನೂನು ತಂದಿದ್ದೆವು. ಆಗ ಬಿಜೆಪಿಯವರು ಇದ್ದರಾ'' ಎಂದು ಪ್ರಶ್ನಿಸಿರುವ ಅವರು, ''ಕಾಂಗ್ರೆಸ್ಗೆ ಬಿಜೆಪಿಗಿಂತ ಅಧಿಕ ಕಾರ್ಯಕರ್ತರ ಬಲವಿದೆ'' ಎಂದರು.
''ಕಾಂಗ್ರೆಸ್ಗೆ ಹಿನ್ನಡೆಯಾದರೆ ಬಡವರಿಗೆ ರೈತರಿಗೆ, ಕಾರ್ಮಿಕರಿಗೆ, ಹಿಂದುಳಿದವರಿಗೆ, ದಲಿತರಿಗೆ ಹಿನ್ನಡೆಯಾದಂತೆ'' ಎಂದು ಕೂಡಾ ಹೇಳಿದರು.
ಇನ್ನು, ''ಗೋ ಮಾಂಸ ಸೇವನೆಗೆ ಸಂಬಂಧಿಸಿ ಮಾತನಾಡಿದ ಅವರು, ಬೇರೆ ಜಾತಿಯವರು ಏನೆಂದು ಕೊಳ್ಳುತ್ತಾರೆ ಎಂದು ನಾವು ಸುಮ್ಮನಾಗಬಾರದು. ನಾವು ನಮ್ಮ ಸಿದ್ದಾಂತವನ್ನು ದೈರ್ಯವಾಗಿ ಹೇಳಬೇಕು'' ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.
''ಮೊದಲು ನಮಗೆ ಕೆಲವು ವಿಚಾರದಲ್ಲಿ ಸ್ಪಷ್ಟತೆ ಇರಬೇಕು. ನಾವು ಗೋ ಮಾತೆಯನ್ನು ನಾವು ಪೂಜಿಸುತ್ತೇವೆ ಸರಿ. ಆದರೆ ವಯಸ್ಸಾದ ಹಸು, ಗಂಡು ಕರುವನ್ನು ಏನು ಮಾಡುವುದು. ಇದನ್ನು ಕಾಂಗ್ರೆಸ್ನವರು ಸ್ಪಷ್ಟವಾಗಿ ಹೇಳಬೇಕು'' ಎಂದರು.
''ನಾವೆಲ್ಲರೂ ಗಾಂಧೀಜಿ ಹಿಂದುತ್ವದವರು. ಬಿಜೆಪಿಯವರದ್ದು ಸಾರ್ವಕರ್ ಹಿಂದುತ್ವ. ಬಿಜೆಪಿಯವರು ಯಾರದರೂ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ್ದಾರೆಯೇ? ಬ್ರಿಟಿಷರಿಗೆ ಬರೆದುಕೊಡೋಡದು ಬಿಜೆಪಿಯವರ ದೇಶಭಕ್ತಿಯೇ?'' ಎಂದು ಪ್ರಶ್ನಿಸಿದರು.