ನವದೆಹಲಿ, ಡಿ. 28 (DaijiworldNews/MB) : ''ಪ್ರಸ್ತುತ 18 ನಗರಗಳಲ್ಲಿ ಮೆಟ್ರೋ ಸೇವೆಯಿದ್ದು 2025 ರ ವೇಳೆಗೆ ಭಾರತವು 25 ಕ್ಕೂ ಹೆಚ್ಚು ನಗರಗಳಲ್ಲಿ ಮೆಟ್ರೋ ಸೇವೆ ಇರಲಿದೆ'' ಎಂದು ಪ್ರಧಾನಿ ನರೇಂದ್ರ ಮೋದಿಯರವರು ಹೇಳಿದರು.
ಹಲಿ ಮೆಟ್ರೋದ ಮೆಜೆಂತಾ ಮಾರ್ಗದಲ್ಲಿ ಭಾರತದ ಮೊದಲ ಚಾಲಕರಹಿತ ಮೆಟ್ರೋ ರೈಲು ಕಾರ್ಯಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, "ದೇಶದ ಮೊದಲ ಮೆಟ್ರೋವನ್ನು ಅಟಲ್ ಜಿ ಅವರ ಪ್ರಯತ್ನದಿಂದ ಪ್ರಾರಂಭಿಸಲಾಯಿತು. 2014 ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ ಕೇವಲ ಐದು ನಗರಗಳಲ್ಲಿ ಮಾತ್ರ ಮೆಟ್ರೋ ಸೇವೆ ಇತ್ತು. ಆದರೆ ಈಗ 18 ನಗರಗಳಲ್ಲಿ ಮೆಟ್ರೋ ರೈಲು ಸೇವೆಯಿದೆ. 2025 ರ ಹೊತ್ತಿಗೆ ನಾವು ಈ ಸೇವೆಯನ್ನು ಹೆಚ್ಚು 25 ನಗರಗಳಲ್ಲಿ ಆರಂಭಿಸಲಿದ್ದೇವೆ'' ಎಂದು ಹೇಳಿದರು.
''2014 ರಲ್ಲಿ ತಮ್ಮ ಸರ್ಕಾರ ರಚನೆಯಾದಾಗ ದೇಶವು 248 ಕಿಲೋಮೀಟರ್ ಮೆಟ್ರೊ ನೆಟ್ವರ್ಕ್ ಹೊಂದಿತ್ತು. ಅದು ಇಂದು ಮೂರು ಪಟ್ಟು ಹೆಚ್ಚಾಗಿದೆ. 2025 ರ ವೇಳೆಗೆ 700 ಕಿಲೋಮೀಟರ್ಗೆ ವಿಸ್ತರಿಸಲಾಗುತ್ತದೆ. 014 ರಲ್ಲಿ 17 ಲಕ್ಷ ಜನರು ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಈಗ ಪ್ರಯಾಣಿಕರ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ. ಇದು ಜನರ ಸಂಚಾರ ಸುಲಭಗೊಳಿಸಿದೆ'' ಎಂದರು.
ವಿಮಾನ ನಿಲ್ದಾಣ ಎಕ್ಸ್ಪ್ರೆಸ್ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿರುವ ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ ಅನ್ನು ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ''ಈ ಸೌಲಭ್ಯವು 2022 ರ ವೇಳೆಗೆ ಇಡೀ ದೆಹಲಿ ಮೆಟ್ರೋ ನೆಟ್ವರ್ಕ್ನಲ್ಲಿ ಲಭ್ಯವಾಗಲಿದೆ. ಭಾರತವು ಸ್ಮಾರ್ಟ್ ವ್ಯವಸ್ಥೆಯತ್ತ ಹೇಗೆ ವೇಗವಾಗಿ ಸಾಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಇದನ್ನು ದೇಶದಲ್ಲಿ ಉತ್ತಮ ಮೂಲಸೌಕರ್ಯಗಳನ್ನು ಹೊಂದಲು ಮತ್ತು ಜೀವನದಲ್ಲಿ ಸುಲಭತೆ ಅಧಿಕಗೊಳಿಸಲು ಇದು ಸಹಕಾರಿ'' ಎಂದು ಹೇಳಿದರು.