ಬೆಂಗಳೂರು, ಡಿ.28 (DaijiworldNews/PY): ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ರಾಜ್ಯದ ಎಲ್ಲಾ ವಿಧಾನಸಭಾ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, "ಸಿಎಂ ಅವರ ಸೂಚನೆ ಹಾಗೂ ರಾಜ್ಯ ಕೊರೊನಾ ತಾಂತ್ರಿಕಾ ಸಲಹಾ ಸಮಿತಿಯ ಮೇರೆಗೆ ಹಾಗೂ ಮಾರ್ಗದರ್ಶನದಂತೆ ಜ.1ರಿಂದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಹಾಗೂ ವಿದ್ಯಾಗಮ ಕಾರ್ಯಕ್ರಮ ಪ್ರಾರಂಭಿಸುತ್ತಿದ್ದು, ನಿಮ್ಮ ಸಹಕಾರ ಅಗತ್ಯ" ಎಂದು ಉಲ್ಲೇಖಿಸಿದ್ದಾರೆ.
"ಶಾಲಾರಂಭದ ಬಗ್ಗೆ ಇಲಾಖೆಗಳ ಸಮನ್ವಯದೊಂದಿಗೆ ಅಧಿಕಾರಿಗಳಿಗೆ ಸೂಕ್ತವಾದ ಸೂಚನೆ ಸೇರಿದಂತೆ ಸಲಹೆ, ಮಾರ್ಗದರ್ಶನಗಳನ್ನು ನೀಡಿ ಸಹಕಾರ ನೀಡಬೇಕು" ಎಂದು ಮನವಿ ಮಾಡಿದ್ದಾರೆ.
"ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವೇಳೆ ತಮ್ಮ ಕ್ಷೇತ್ರ ಹಾಗೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಹಕರಿಸಿದಂತೆ ಶಾಲಾರಂಭಕ್ಕೂ ಕೂಡಾ ಹೆಚ್ಚಿನ ಸಹಕಾರ ನೀಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೂ ಕೂಡಾ ನೆರವಾಗಬೇಕು" ಎಂದು ಕೋರಿದ್ದಾರೆ.