ಬೆಂಗಳೂರು, ಡಿ. 28 (DaijiworldNews/MB) : ''ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಜಾರಿಯಾದರೂ ಕೂಡಾ ಗೋಮಾಂಸ ಮಾರಾಟ ನಿಷೇಧವಾಗಲ್ಲ'' ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಸೋಮವಾರ ಸಂಪುಟ ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಹೊಸ ಕಾಯ್ದೆ ಜಾರಿಯಾದರೂ ಎಮ್ಮೆ, ಕೋಣದ ಮಾಂಸ ಮಾರಾಟಕ್ಕೆ ಯಾವುದೇ ನಿಷೇಧವಿಲ್ಲ. ಹಸುವಿನ ಮಾಂಸ ಮಾರಾಟ ಮಾತ್ರ ಸಂಪೂರ್ಣ ನಿಷೇಧವಾಗಲಿದೆ'' ಎಂದು ಹೇಳಿದರು.
''ಹಾಗೆಯೇ ಚರ್ಮೋದ್ಯಮಕ್ಕೂ ಯಾವುದೇ ಸಮಸ್ಯೆ ಆಗುವುದಿಲ್ಲ'' ಎಂದು ಕೂಡಾ ತಿಳಿಸಿದರು.
''1964ರ ಗೋಹತ್ಯೆ ನಿಷೇಧ ಕಾಯ್ದೆಯ ಪ್ರಕಾರವಾಗಿ 12 ವರ್ಷಕ್ಕಿಂತ ಅಧಿಕ ವಯಸ್ಸಾದ ಹಸು, ಎಮ್ಮೆ, ಕೋಣಗಳನ್ನು ಮಾಂಸಕ್ಕಾಗಿ ವಧೆ ಮಾಡಲು ಅವಕಾಶವಿತ್ತು. ಆದರೆ ಈಗಿನ ತಿದ್ದುಪಡಿ ಮಸೂದೆ ಪ್ರಕಾರ ಹಸು ಮತ್ತು ಎತ್ತುಗಳನ್ನು ಜೀವಿತಾವಧಿಯವರೆಗೂ ವಧೆ ಮಾಡುವಂತಿಲ್ಲ. ಎಮ್ಮೆ ಮತ್ತು ಕೋಣಗಳನ್ನು 13 ವರ್ಷದ ಬಳಿಕ ವಧೆ ಮಾಡಬಹುದು'' ಎಂದು ಕೂಡಾ ಮಾಹಿತಿ ನೀಡಿದರು.
''ವಿಧಾನಸಭೆಯಲ್ಲಿ ಅಂಗೀಕಾರವಾಗಿ ಪರಿಷತ್ನಲ್ಲಿ ಅವಕಾಶ ಸಿಗದ ಕಾರಣ ಗೋಹತ್ಯೆ ನಿಷೇಧಕ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ'' ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದರು.