ಕೋಲ್ಕತ್ತಾ, ಡಿ. 28 (DaijiworldNews/MB) : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಮತ್ತು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ರಾಜಕೀಯ ಪ್ರವೇಶಿಸುತ್ತಾರೆ, ಅದರಲ್ಲೂ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹ ಸುದ್ದಿಗಳು ಹರಿದಾಡುತ್ತಿರುವ ನಡುವೆ ಬಿಜೆಪಿ ಸೇರ್ಪಡೆ ವಿಚಾರವಾಗಿ ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ.
ಸೌರವ್ ಗಂಗೂಲಿ ಅವರು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ರವಿವಾರ ಭೇಟಿ ಆಗಿದ್ದರು. ಅವರಿಬ್ಬರು ಸುಮಾರು ಒಂದು ಗಂಟೆ ಮಾತುಕತೆ ನಡೆಸಿದ್ದರು. ಈ ಭೇಟಿಯು ಗಂಗೂಲಿ ರಾಜಕೀಯ ಸೇರ್ಪಡೆಯಾಗುವ ಊಹಾಪೋಹಗಳು ಮತ್ತಷ್ಟು ಹರಿದಾಡಲು ಕಾರಣವಾಯಿತು.
ಈ ವಿಚಾರಕ್ಕೆ ಸಂಬಂಧಿಸಿ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿರುವ ಗಂಗೂಲಿ, ''ರಾಜ್ಯಪಾಲರು ನಿಮ್ಮನ್ನು ಭೇಟಿ ಮಾಡಲು ಬಯಸಿದರೆ, ನೀವು ಅವರನ್ನು ಭೇಟಿ ಮಾಡಬೇಕು. ನನ್ನ ಭೇಟಿಯು ಕೂಡಾ ಹಾಗೆಯೇ'' ಎಂದು ಹೇಳಿದ್ದಾರೆ.