ಪುಣೆ,ಡಿ.28 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿಗೆ ಸಂಬಂಧಿಸಿದ ಕಾಯ್ದೆಗಳನ್ನು ರದ್ದುಗೊಳಿಸಿ ರೈತರ ಸಮಸ್ಯೆಗಳನ್ನು ಮುಂದಿನ ಜನವರಿ ಒಳಗಾಗಿ ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಳೆದ ಮೂರು ವರ್ಷಗಳಿಂದ ನಾನು ರೈತರಿಗಾಗಿ ಪ್ರತಿಭಟನೆ ನಡೆಸುತ್ತಿದ್ದೇನೆ, ಆದರೆ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಏನೂ ಮಾಡಿಲ್ಲ. ಸರ್ಕಾರವು ಕೇವಲ ಖಾಲಿ ಭರವಸೆಗಳನ್ನು ನೀಡುತ್ತಿದ್ದು, ನನಗೆ ಸರ್ಕಾರ ಮೇಲೆ ಯಾವುದೇ ನಂಬಿಕೆ ಉಳಿದಿಲ್ಲ. ಜನವರಿ ಅಂತ್ಯದವರೆಗೆ ಅವರಿಗೆ ಸಮಯ ನೀಡಿದ್ದೇನೆ. ನನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ, ನಾನು ಉಪವಾಸ ಸತ್ಯಾಗ್ರಹವನ್ನು ಪುನರಾರಂಭಿಸುತ್ತೇನೆ" ಎಂದರು.
ಇನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ಗೆ ಅವರಿಗೆ ಪತ್ರ ಬರೆದಿದ್ದ ಅಣ್ಣಾ ಹಜಾರೆ, "ಎಂಎಸ್ ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಮತ್ತು ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗಕ್ಕೆ ಸ್ವಾಯತ್ತತೆ ನೀಡಬೇಕು" ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹದ ನಡೆಸುವ ಎಚ್ಚರಿಕೆ ನೀಡಿದ್ದರು.