ಬೆಂಗಳೂರು, ಡಿ.28 (DaijiworldNews/HR): ವಿಧಾನಸಭೆಯಲ್ಲಿ ಅಂಗೀಕಾರವಾಗಿ ಪರಿಷತ್ನಲ್ಲಿ ಅವಕಾಶ ಸಿಗದ ಕಾರಣ ಗೋಹತ್ಯೆ ನಿಷೇಧಕ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಗೋವು ನಮ್ಮ ಭಾರತೀಯ ಸಂಸ್ಕೃತಿಯ ಮತ್ತು ಶ್ರದ್ದೆಯ ಹಾಗೂ ರೈತರ ಜೀವನಾಧಾರದ ಮೂಲವಾಗಿದೆ. ವರ್ಷದಿಂದ ವರ್ಷಕ್ಕೆ ಗೋವುಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ನೀಜಕ್ಕೂ ಕಳವಳಕಾರಿ ಸಂಗತಿಯಾಗಿದೆ. ಕೇವಲ ರಾಜಕೀಯ ದುರುದ್ದೇಶಕ್ಕೆ ಕಾಯ್ದೆಯನ್ನು ವಿರೋಧಿಸಿ ಸಮಾಜದಲ್ಲಿ ಜನಸಾಮಾನ್ಯರ ನಡುವೆ ತಪ್ಪು ಕಲ್ಪನೆ ಮೂಡಿಸುವುದು ಅಸಹನೀಯ" ಎಂದರು.
ಇನ್ನು "ಗೋವುಗಳ ಸಂರಕ್ಷಣೆಗೆ ಉತ್ತರಪ್ರದೇಶ ಮತ್ತು ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಪ್ರಯೋಗಗಳು ನಡೆಯುತ್ತಿದ್ದು ಗೋವುಗಳ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಏರಿಕೆ ಕಂಡುಬಂದಿದೆ" ಎಂದು ಹೇಳಿದ್ದಾರೆ.
"ಬಿಜೆಪಿ ಸರ್ಕಾರದ ಅವಧಿಯಲ್ಲಿ 2010 ರಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆ ಮಾಡಿದಾಗ ಕೇಂದ್ರ ಸರ್ಕಾರಕ್ಕೆ ಇದ್ದ ಆಕ್ಷೇಪಣೆಗಳನ್ನು ಈಗಿನ ಮಸೂದೆಯಲ್ಲಿ ಸರಿಪಡಿಸಲಾಗಿದೆ" ಎಂದರು.