ಬೆಂಗಳೂರು, ಡಿ.28 (DaijiworldNews/HR): "ಆರ್ಟಿಇ ಶುಲ್ಕ ಸಂಪೂರ್ಣ ಮರುಪಾವತಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿಕೆ ನೀಡಿದ್ದು, ಇದು ಅಪ್ಪಟ ಸುಳ್ಳು" ಎಂದು ರಾಜ್ಯ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಈ ವಿಷಯದಲ್ಲಿ ಶಿಕ್ಷಣ ಸಚಿವರು ಅಧಿಕಾರಿಗಳಿಂದ ಸರಿಯಾದ ಮಾಹಿತಿ ತಿಳಿದುಕೊಂಡು ಹೇಳಿಕೆ ನೀಡಬೇಕು. ಜನರ ಕಣ್ಣಿಗೆ ಮಣ್ಣೆರಚುವಂತಹ ಕೆಲಸವನ್ನು ಮಾಡಬಾರದು" ಎಂದರು.
ಇನ್ನು ಸಚಿವ ಸುರೇಶ್ ಕುಮಾರ್ ಹೇಳಿರುವ ಆರ್ಟಿಇ ಶುಲ್ಕ ಮರುಪಾವತಿ 550 ಕೋಟಿ ಬಿಡುಗಡೆ ಮಾಡಿರುವುದು ಕಳೆದ ವರ್ಷದ ಶುಲ್ಕ. 2018–19ರ ಲೆಕ್ಕಪತ್ರಕ್ಕೆ ಅನುಗುಣವಾಗಿ 2019– 20ನೇ ಸಾಲಿನ ಶುಲ್ಕಮರುಪಾವತಿಯ ಬಾಕಿ ಸಾಲವನ್ನು ಈ ವರ್ಷ ಕೊಟ್ಟಿದ್ದಾರೆ. 2019–20ರ ಅಡಿಟ್ ಪ್ರಕಾರ 2020– 2021ನೇ ಸಾಲಿಗೆ ಸೆಪ್ಟೆಂಬರ್ 30ರ ಒಳಗೆ ನಮಗೆ ಮೊದಲ ಕಂತು ಬಿಡುಗಡೆ ಆಗಬೇಕಿತ್ತು. ಆದರೆ ಒಂದು ರೂಪಾಯಿ ಕೂಡ ಬಿಡುಗಡೆ ಆಗಿಲ್ಲ. ಜನವರಿಗೆ ಎರಡನೇ ಕಂತು ಬಿಡುಗಡೆ ಆಗಬೇಕಿತ್ತು ಆದರೆ ಅದು ಕೂಡ ಬಿಡುಗಡೆಯಾಗಿಲ್ಲ" ಎಂದು ಹೇಳಿದ್ದಾರೆ.