ಅಮೇಥಿ,ಡಿ.28 (DaijiworldNews/HR): "ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡಿ ದೇಶದಲ್ಲಿ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ" ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ಈ ಕುರಿತು ಅಮೇಥಿಯಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡು ಮಾತನಾಡಿದ ಅವರು, "ತಮ್ಮ ರಾಜಕಾರಣವನ್ನು ನಿರಾತಂಕವಾಗಿ ನಡೆಸಲೆಂದೇ ಗಾಂಧಿ ಕುಟುಂಬ ಮತ್ತು ರಾಹುಲ್ ಗಾಂಧಿ, ರೈತರು, ಬಡವರನ್ನು ಬಡತನಕ್ಕೆ ದೂಡಿದ್ದಾರೆ. ಇದೇ ರೀತಿಯಲ್ಲಿ ಹೋದರೆ ಕಾಂಗ್ರೆಸ್, 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿ ಕ್ಷೇತ್ರವನ್ನು ಕಳೆದುಕೊಳ್ಳಲಿದೆ" ಎಂದರು.
ಇನ್ನು "ಅಮೇಥಿ ಕ್ಷೇತ್ರವು ಈಗಾಗಲೇ ರಾಹುಲ್ ಗಾಂಧಿಗೆ ಗುಡ್ ಬೈ ಹೇಳಿದ್ದು, ಇದೇ ರೀತಿ ರಾಯ್ ಬರೇಲಿ ಸಹ 2024ರ ಚುನಾವಣೆಯಲ್ಲಿ ಗಾಂಧಿ ಕುಟುಂಬಕ್ಕೆ ಗುಡ್ ಬೈ ಹೇಳಲಿದೆ. ಒಂದು ಸಾಮಾನ್ಯ ಕುಟುಂಬದಿಂದ ಬಂದ ನಾನು ಗಾಂಧಿ ಕುಟುಂಬದ ವಿರುದ್ಧ ಹೋರಾಡುವುದು ಸುಲಭವಾಗಿರಲಿಲ್ಲ" ಎಂದು ಹೇಳಿದ್ದಾರೆ.