ಬೆಂಗಳೂರು, ಡಿ.28 (DaijiworldNews/PY): ಎಟಿಎಂಗಳಲ್ಲಿ ಕನ್ನಡ ಭಾಷೆಯ ಆಯ್ಕೆ ತೆಗೆದಿರುವ ವಿಚಾರದ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, "ಎಟಿಎಂಗಳಲ್ಲಿ ಕನ್ನಡ ಭಾಷೆಯ ಆಯ್ಕೆ ತೆಗೆದಿರುವುದನ್ನು ಸಹಿಸಲು ಸಾಧ್ಯವಿಲ್ಲ" ಎಂದಿದ್ದಾರೆ..
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಭಾಷಾ ಸೂತ್ರದ ಅನ್ವಯ ರಾಜ್ಯದಲ್ಲಿ ಕಾರ್ಯಾಚರಿಸುವ ಉದ್ದಿಮೆ/ಇಲಾಖೆಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು. ಆದರೆ ಆಗಿಂದಲೂ ಬ್ಯಾಂಕ್ಗಳು ಕನ್ನಡವನ್ನು ಕಡೆಗಣಿಸಿ ಕನ್ನಡಿಗರ ಆತ್ಮಾಭಿಮಾನ ಕೆಣಕುತ್ತಿವೆ. ಎಟಿಎಂಗಳಲ್ಲಿ ಕನ್ನಡ ಭಾಷೆಯ ಆಯ್ಕೆ ತೆಗೆದಿರುವುದನ್ನು ಸಹಿಸಲು ಸಾಧ್ಯವಿಲ್ಲ. ಸರ್ಕಾರ ಕೂಡಲೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿ" ಎಂದಿದ್ದಾರೆ.
ಬಹುತೇಕ ಎಟಿಎಂಗಳಲ್ಲಿ ಕನ್ನಡದಲ್ಲಿದ್ದ ಆಯ್ಕೆಯೇ ಮಾಯವಾಗಿದೆ. ಗ್ರಾಹಕರಿಗೆ ಅರ್ಥವಾಗುವ ಭಾಷೆಯಲ್ಲಿ ಸೇವೆ ಹಾಗೂ ಜಾಹೀರಾತನ್ನು ನೀಡಬೇಕೆಂದು ಕಾರ್ಮಿಕ ಇಲಾಖೆಯ ಕಾನೂನಿನಲ್ಲಿದೆ. ಆಗಾಗೆ ಇಲಾಖೆಗಳಿಗೆ ಭೇಟಿ ನೀಡುವ ಕನ್ನಡ ಅಭಿವೃದ್ದಿ ಪ್ರಾಧಿಕಾರ ಈ ಬಗ್ಗೆ ಸುತ್ತೋಲೆಗಳ ಮುಖೇನ ಜಾಗೃತಿ ಹಾಗೂ ಎಚ್ಚರಿಕೆ ನೀಡುತ್ತಿರುತ್ತದೆ. ಆದರೂ ಕೂಡಾ ಬ್ಯಾಂಕ್ಗಳು ಸದ್ದಿಲ್ಲದೇ ಎಟಿಎಂನಿಂದ ಕನ್ನಡವನ್ನು ತೆಗೆದುಹಾಕಿವೆ.