ಬೆಂಗಳೂರು, ಡಿ.28 (DaijiworldNews/HR): ಬ್ರಿಟನ್ನಿಂದ ಕರ್ನಾಟಕಕ್ಕೆ ಬಂದ 1,614 ಜನರನ್ನು ಈವರೆಗೆ ತಪಾಸಣೆಗೆ ಒಳಪಡಿಸಲಾಗಿದ್ದು, ಅವರ ಪೈಕಿ 26 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕೊರೊನಾ ಸೋಂಕು ಪತ್ತೆ ಆದ ಎಲ್ಲರಿಗೂ ಸರ್ಕಾರದ ಸುಪರ್ದಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ ಯಾರಿಗೂ ಗಂಭೀರ ಲಕ್ಷಣಗಳು ಕಂಡುಬಂದಿಲ್ಲ. ವಿದೇಶದಿಂದ ಬಂದವರರಲ್ಲಿ ಅನೇಕರು ಇನ್ನೂ ಪತ್ತೆಯಾಗಿಲ್ಲ, ಅದರಲ್ಲೂ ಬ್ರಿಟನ್ನಿಂದ ಬಂದವರಿದ್ದಾರೆ. ಹಲವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡುವ ಕೆಲಸ ಮುಂದುವರಿದೆ" ಎಂದರು.
ಇನ್ನು "ಪರೀಕ್ಷೆಗೆ ಒಳಗಾಗದಿರುವವರು ಸರ್ಕಾರದ ಜೊತೆ ಸಹಕರಿಸಬೇಕು. ಅದು ಅವರ ಜವಾಬ್ದಾರಿಯಾಗಿದೆ. ತಲೆಮರೆಸಿಕೊಂಡು ಓಡಾಡುವುದು ಅಪರಾಧ. ಹಾಗೆಯೇ ಇಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯ ಬಳಿಕ ತಲೆಮರೆಸಿಕೊಂಡವರ ಪತ್ತೆ ಕುರಿತು ಗೃಹ ಸಚಿವರ ಜೊತೆ ಚರ್ಚೆ ನಡೆಸುತ್ತೇನೆ" ಎಂದು ಹೇಳಿದ್ದಾರೆ.