ಮುಂಬೈ, ಡಿ.28 (DaijiworldNews/PY): ಈ ಹಿಂದೆ ಕೇಂದ್ರ ಸಚಿವ ರಾಮದಾಸ್ ಅಠವಾಳೆ ಅವರ 'ಗೋ ಕೊರೊನಾ ಗೋ' ಎನ್ನುವ ಘೋಷಣೆ ದೇಶದಾದ್ಯಂತ ಮನೆಮಾತಾಗಿತ್ತು. ಇದೀಗ ರೂಪಾಂತರಿ ಕೊರೊನಾ ವೈರಸ್ಗೆ 'ನೋ ಕೊರೊನಾ ನೋ' ಎನ್ನುವ ಮತ್ತೊಂದು ಘೋಷಣೆ ಹೊರಡಿಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ಈ ಹಿಂದೆ ಗೋ ಕೊರೊನಾ ಗೋ ಎಂದು ಹೇಳಿದ್ದೆ. ಆದರೆ, ಕೊರೊನಾ ನನ್ನ ಬಳಿಯೂ ಬಂದಿತ್ತು. ನನಗೆ ಕೊರೊನಾ ದೃಢಪಟ್ಟಿತ್ತು. ಕೊರೊನಾ ನನ್ನ ಬಳಿ ತಲುಪುವುದಿಲ್ಲ ಎಂದು ಭಾವಿಸಿದ್ದೆ. ನನ್ನ ಹೇಳಿಕೆಯಂತೆ ಈಗ ಹಳೆಯ ಕೊರೊನಾ ಹೋಗುತ್ತಿದೆ. ರೂಪಾಂತರಿ ಕೊರೊನಾಕ್ಕೆ ನಾನು ನೋ ಕೊರೊನಾ ನೋ ಎಂದು ಹೇಳುತ್ತೇನೆ" ಎಂದಿದ್ದಾರೆ.
ಫೆಬ್ರವರಿಯಲ್ಲಿ ಅಠವಾಳೆ ಅವರು ಸಭೆಯೊಂದರಲ್ಲಿ 'ಗೋ ಕೊರೊನಾ ಗೋ' ಎಂದು ಹೇಳಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
"ಬ್ರಿಟನ್ನಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಇದು ಅತ್ಯಂತ ವೇಗವಾಗಿ ವ್ಯಾಪಿಸುತ್ತಿದೆ" ಎಂದು ಬ್ರಿಟನ್ ಸರ್ಕಾರ ಹೇಳಿತ್ತು.
"ರೂಪಾಂತರಿ ಕೊರೊನಾ ವೈರಸ್ ಹರಡುವುದನ್ನು ನಿಲ್ಲಿಸಲು ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.