ಬೆಂಗಳೂರು, ಡಿ.28 (DaijiworldNews/PY): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಧಾರ್ಮಿಕ ನಂಬಿಕೆ ಹಾಗೂ ಮಾಂಸಾಹಾರದ ವಿಚಾರವಾಗಿ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.
ಈ ವಿಚಾರದ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಟ್ವೀಟ್ ಮಾಡಿದ್ದು, "ಅಣ್ಣಾ, ಇವತ್ತು ಹನುಮ ಜಯಂತಿ ಎಂದು ನೆನಪಿಸಿದ ಗ್ರಾಮಸ್ಥನಿಗೆ, ಯಾವ ಜಯಂತಿ? ಹನುಮ ಹುಟ್ಟಿದ ತಾರೀಕು ನಿನಗೆ ಗೊತ್ತಾ? ಏನೂ ಆಗಲ್ಲ ತಿನ್ನು. ಹನುಮ ಹುಟ್ಟಿದ ದಿನ ಗೊತ್ತಿದ್ದರೆ ಮಾಡಬೇಕು. ಗೊತ್ತಿಲ್ಲ ಅಲ್ವಾ? ಚಿಕನ್ ತಿನ್ನು ಎಂದು ತಮ್ಮದೇ ಧಾಟಿಯಲ್ಲಿ ಛೇಡಿಸಿದರಂತೆ ಈ ನಾಯಕರು" ಎಂದಿದ್ದಾರೆ.
"ಈ ನೆಲದ ನಂಬಿಕೆಗಳಿಗೆ ಈ ರೀತಿ ಅವಮಾನ ಮಾಡುವುದೇ ಜಾತ್ಯಾತೀತತೆ ಎಂದು ನಂಬಿದ್ದಾರೆ ಈ ರೀತಿಯ ನಾಯಕರುಗಳು. ಇವರಂತೆಯೆ ಮತ್ತೊಬ್ಬ ನಾಯಕರು ಈ ಹಿಂದೆ ಶ್ರೀ ರಾಮನ ಜನನ ಪ್ರಮಾಣ ಪತ್ರ ಎಲ್ಲಿ ಎಂದು ಕೇಳಿದ್ದು ನೆನಪಿಗೆ ಬರುತ್ತಿದೆ" ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಗ್ರಾ.ಪಂ. ಚುನಾವಣೆಯ ಹಿನ್ನೆಲೆ ರವಿವಾರ ತಮ್ಮ ಹುಟ್ಟೂರಿಗೆ ತೆರಳಿದ್ದರು. ಆ ವೇಳೆ ಚಿಕನ್ ಊಟ ಮಾಡುತ್ತಿದ್ದ ಸಿದ್ದರಾಮಯ್ಯ ಅವರ ಅಭಿಮಾನಿಯೋರ್ವರು, ಅಣ್ಣಾ ಇವತ್ತು ಹನುಮ ಜಯಂತಿ ಎಂದು ನೆನಪಿಸಿದ್ದಾರೆ. ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "ಹನುಮ ಹುಟ್ಟಿಇದ ದಿನ ನಿನಗೆ ಗೊತ್ತಾ?. ತಿಳಿದಿದ್ದರೆ ಆಚರಿಸು. ಸುಮ್ಮನೆ ಚಿಕನ್ ತಿನ್ನು" ಎಂದಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆ ಸಿದ್ದರಾಮಯ್ಯ ಅವರು ಮೀನಿನ ಊಟ ಸವಿದ ಬಳಿಕ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ವಿಚಾರ ವಿವಾದಕ್ಕೀಡಾಗಿತ್ತು.