ನವದೆಹಲಿ, ಡಿ.27 (DaijiworldNews/PY): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ನ ಮಧ್ಯೆ ಆರೋಪ ಹಾಗೂ ಪ್ರತ್ಯಾರೋಪಗಳು ಹೆಚ್ಚಾಗುತ್ತಿದ್ದು, ಈ ನಡುವೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಕೃಷಿ ಕಾಯ್ದೆಗೆ ಬೆಂಬಲ ನೀಡಿದ್ದ ರಾಹುಲ್ ಗಾಂಧಿ ಅವರ ಹಳೆಯ ಭಾಷಣಗಳನ್ನು ಪ್ರಕಟಿಸಿದ್ದಾರೆ.
ಕೃಷಿ ಕಾನೂನಿನ ವಿಚಾರವಾಗಿ ಲೋಕಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಕೃಷಿ ಕಾನೂನಿನಿಂದ ರೈತರಿಗೆ ಮಧ್ಯವರ್ತಿಗಳಿಂ ಮುಕ್ತಿ ದೊರಕಲಿದ್ದು, ತಮ್ಮ ಬೆಳೆಗಳನ್ನು ನೇರವಾಗಿ ಉದ್ಯಮಿಗಳಿಗೆ ಮಾರಾಟ ಮಾಡಬಹುದು ಎಂದು ಹೇಳಿದ್ದರು ಎನ್ನಲಾಗಿದೆ.
ಕೃಷಿ ಕಾನೂನೂನಿನ ವಿರುದ್ದವಾಗಿರುವ ರೈತರಿಗೆ ಬೆಂಬಲ ನೀಡುತ್ತಿರುವ ರಾಹುಲ್ ಗಾಂಧಿ ಅವರ ವಿರುದ್ದ ಇದೇ ವಿಚಾರದ ಬಗ್ಗೆ ಆರೋಪಿಸಿರುವ ನಡ್ಡಾ, "ಕೃಷಿ ಕಾಯ್ದೆಗೆ ಈ ಹಿಂದೆ ನೀವೆ ಬೆಂಬಲಿಸಿದ್ದೀರಿ, ಇದೀಗ ನಿವೇ ವಿರೋಧ ವ್ಯಕ್ತಪಡಿಸುತ್ತಿದ್ದೀರ. ಈ ವಿಚಾರದಲ್ಲಿ ಕೈ ನಾಯಕರು ರಾಜಕಾರಣ ಮಾಡುತ್ತಿದ್ದಾರೆ" ಎಂದಿದ್ದಾರೆ.
"ರಾಹುಲ್ ಜೀ ಅವರೇ ಇದೇನು ಮ್ಯಾಜಿಕ್ ಆಗುತ್ತಿದೆ. ಈ ಹಿಂದೆ ನೀವೆ ಕೃಷಿ ಕಾಯ್ದೆಗೆ ಬೆಂಬಲ ನೀಡಿದ್ದೀರಿ. ಇದೀಗ ವಿರೋಧಿಸುತ್ತಿದ್ದೀರಿ. ನಿಮಗೆ ದೇಶದ ರೈತರ ಹಿತದೃಷ್ಠಿ ಮುಖ್ಯವಲ್ಲ. ಬದಲಾಗಿ ನಿಮಗೆ ರಾಜಕಾರಣ ಮುಖ್ಯ. ನಿಮ್ಮ ದ್ವಿಮುಖ ನೀತಿ ದೇಶದ ರೈತರಿಗೆ ಅರ್ಥವಾಗಿದೆ" ಎಂದು ಕಿಡಿಕಾರಿದ್ದಾರೆ.