ಪಾಟ್ನಾ, ಡಿ.27 (DaijiworldNews/PY): ಜನತಾ ದಳದ ರಾಷ್ಟ್ರೀಯ ಘಟಕದ ಅಧ್ಯಕ್ಷರಾಗಿ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಆಪ್ತ ಆರ್ಸಿಪಿ ಸಿಂಗ್ ರವಿವಾರ ಆಯ್ಕೆಯಾಗಿದ್ದಾರೆ.
"ಸಿಎಂ ನಿತೀಶ್ ಅವರೇ ಆರ್ಸಿಪಿ ಸಿಂಗ್ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದರು. ಇದನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಅನುಮೋದಿಸಿದ್ದಾರೆ" ಎಂದು ಜೆಡಿಯು ಹಿರಿಯ ನಾಯಕರೋರ್ವರು ಹೇಳಿದ್ದಾರೆ.
ಆರ್ಸಿಪಿ ಸಿಂಗ್ ಅವರು ರಾಜಕೀಯ ಪ್ರವೇಶ ಮಾಡುವ ಮೊದಲೇ ಸರ್ಕಾರಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜಕೀಯ ಪ್ರವೇಶ ಮಾಡಿದ ನಂತರ ಸಿಂಗ್ ಅವರು ಜೆಡಿಯುನ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
"ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ಜೆಡಿಯುನ ಏಳು ಶಾಸಕರಲ್ಲಿ ಆರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಾಗೂ ದೇಶದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲು ಪಕ್ಷ ರಾಷ್ಟ್ರೀಯ ಕಾರ್ಯಕಾರಿ ಸಭೆ ನಡೆಸಿದ್ದು, ಸಭೆಯಲ್ಲಿ ಪಶ್ಚಿಮ ಬಂಗಾಳದ ವಿಚಾರವನ್ನೂ ಕೂಡಾ ಚರ್ಚಿಸಲಾಗಿದೆ" ಎಂದು ಹಿರಿಯ ಮುಖಂಡರೋರ್ವರು ಹೇಳಿದ್ದಾರೆ.