ನವದೆಹಲಿ, ಡಿ.27 (DaijiworldNews/PY): ಚಾಲನಾ ಪರವಾನಗಿಯ ಮಾನ್ಯತೆ ಅವಧಿಯು ಮುಕ್ತಾಯಗೊಂಡಿದ್ದರೂ ಕೂಡಾ ಅದರ ಸಿಂಧುತ್ವ 2021ರ ಮಾರ್ಚ್ 31ರ ತನಕ ವಿಸ್ತರಣೆಯಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಸಾಂದರ್ಭಿಕ ಚಿತ್ರ
ಆರ್ಸಿ, ಡಿಎಲ್, ಫಿಟ್ನೆಸ್ ಸರ್ಟಿಫಿಕೇಟ್, ಪರ್ಮಿಟ್ಗಳು ಸೇರಿ ಮೋಟಾರು ವಾಹನ ಕಾಯ್ದೆ ಹಾಗೂ ಕೇಂದ್ರ ವಾಹನ ನಿಯಮಕ್ಕೆ ಸಂಬಂಧಪಟ್ಟ ದಾಖಲೆಗಳ ಸಿಂಧುತ್ವ ಅವಧಿಯನ್ನು ವಿಸ್ತರಣೆ ಮಾಡಿರುವ ಮಾಹಿತಿಯನ್ನು ರವಿವಾರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ತಿಳಿಸಿದ್ದು, ಇದು 2020ರ ಫೆಬ್ರುವರಿ 1ರಿಂದ ಮಾನ್ಯತೆ ಅವಧಿ ಮುಗಿದ ದಾಖಲೆಗಳಿಗೆ ಅನ್ವಯವಾಗಲಿವೆ.
ಸರ್ಕಾರವು, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಂಡಿದ್ದು, ಈ ಬಗ್ಗೆ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸಾರಿಗೆ ಸಚಿವಾಲಯ ನಿರ್ದೇಶನ ರವಾನಿಸಿದೆ.
ಸಾರಿಗೆ ಸಚಿವಾಲಯವು ಈ ವರ್ಷ ಮಾರ್ಚ್ ತಿಂಗಳಿನಿಂದ ನಾಲ್ಕನೇ ಬಾರಿಗೆ ವಾಹನ ದಾಖಲೆಗಳ ಸಿಂಧುತ್ವದ ಅವಧಿಯನ್ನು ವಿಸ್ತರಣೆ ಮಾಡಿ ನಿರ್ದೇಶನ ನೀಡಿದೆ.