ಬೆಂಗಳೂರು, ಡಿ. 27 (DaijiworldNews/MB) : ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಆಗಿ ನಟಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಗ್ಯಾಂಗ್ ಅನ್ನು ಕೇಂದ್ರ ವಿಭಾಗದ ಸೈಬರ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಚೌಕಿ ಗ್ರಾಮದ ಇಬ್ರಾಹಿಂ (36) ಮತ್ತು ಮೊಹಮ್ಮದ್ ಶೋಕಿನ್ (28) ಬಂಧಿತರು. ಅವರ ಬಳಿಯಲ್ಲಿದ್ದ ಐದು ಮೊಬೈಲ್ ಫೋನ್ಗಳು, ಹತ್ತಕ್ಕೂ ಅಧಿಕ ಸಿಮ್ ಕಾರ್ಡ್ಗಳು ಮತ್ತು ಬ್ಯಾಂಕ್ ಪಾಸ್ಬುಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಬಿ ಎಲ್ ಸಂತೋಷ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಗಳನ್ನು ತೆರೆದಿದ್ದು ಅವರ ಹೆಸರಲ್ಲಿ ಫೇಸ್ಬುಕ್ ಮೆಸೆಂಜರ್ ಬಳಸಿ ಸಂದೇಶಗಳನ್ನು ಕಳುಹಿಸಿದ್ದರು. ಅಜಿತ್ ಎಂಬ ವ್ಯಕ್ತಿ ಹಣವನ್ನು ವರ್ಗಾಯಿಸಿದ್ದ. ಆರೋಪಿಗಳು ಇಂತಹ ಸಂದೇಶಗಳನ್ನು ಇತರರಿಗೂ ಕಳುಹಿಸಿ ವಂಚಿಸಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹಣವನ್ನು ರವಾನಿಸಿದ ಬ್ಯಾಂಕ್ ಖಾತೆ ವಿವರಗಳ ಆಧಾರದ ಮೇಲೆ ಇವರಿಬ್ಬರನ್ನು ಬಂಧಿಸಲಾಗಿದೆ. ಬ್ಯಾಂಕ್ ವಿವರಗಳು ಮತ್ತು ಪಿನ್ ಅನ್ನು ಪತ್ತೆ ಹಚ್ಚುವ ಮೂಲಕ ಅಪರಾಧಿಗಳನ್ನು ಗುರುತು ಪತ್ತೆ ಹಚ್ಚಲಾಗಿದ್ದು ಅವರು ಮಥುರಾ ಬಳಿಯ ಚೌಕಿ ಬಂಗರಾ ಗ್ರಾಮದವರು ಎಂದು ತಿಳಿದು ಬಂದಿದೆ.
ಬೆಂಗಳೂರು ಕೇಂದ್ರ ಸೈಬರ್ ಅಪರಾಧ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ್ದು ಹತ್ತರಲ್ಲಿ ಎಂಟು ಮಂದಿ ಆರೋಪಿಗಳು ಗ್ರಾಮಸ್ಥರ ಸಹಾಯದಿಂದ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದವರಲ್ಲಿ ಗ್ಯಾಂಗ್ನ ಮಾಸ್ಟರ್ ಮೈಂಡ್ ಲಿಯಾಕತ್ ಕೂಡ ಇದ್ದಾನೆ ಎನ್ನಲಾಗಿದೆ. ದ್ವಿತೀಯ ಪಿಯುಸಿವರೆಗೆ ಕಲಿತಿದ್ದ ಲಿಯಾಕತ್ ಆರೋಪಿಗಳಿಗೆ 'ಇಂಗ್ಲಿಷ್ನಲ್ಲಿ ಚಾಟ್ ಮಾಡಲು ಕಲಿಸಿದ್ದನು ಎನ್ನಲಾಗಿದೆ.
ಗ್ಯಾಂಗ್ ಸದಸ್ಯರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ಫೇಸ್ಬುಕ್ ಖಾತೆಗಳನ್ನು ತೆರೆಯುತ್ತಿದ್ದರು. ಪಿಂಚಣಿ ಮಂಜೂರು ಮಾಡುವ ಭರವಸೆ ನೀಡುವ ಮೂಲಕ ಮುಗ್ಧ ಜನರಿಂದ ಬ್ಯಾಂಕ್ ಖಾತೆ ವಿವರಗಳನ್ನು ಸಂಗ್ರಹಿಸುತ್ತಿದ್ದರು. ನಂತರ ಅವರು ಆನ್ಲೈನ್ ಬ್ಯಾಂಕಿಂಗ್, ಎಟಿಎಂ ಕಾರ್ಡ್ಗಳು ಮತ್ತು ಬ್ಯಾಂಕ್ ವಿವರಗಳ ಮೂಲಕ ಹಣ ದೋಚುತ್ತಿದ್ದರು ಎಂದು ಹೇಳಲಾಗಿದೆ.