ಮೈಸೂರು, ಡಿ. 27 (DaijiworldNews/MB) : ''ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹೋರಾಟದ ಹಿಂದೆ ಆರ್ಎಸ್ಎಸ್ ಇದ್ದರೆ ತಪ್ಪೇನು'' ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಹೆಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಈ ಹೋರಾಟ ಈಶ್ವರಪ್ಪ ಅಥವಾ ನನಗೆ ಪ್ರತಿಷ್ಠೆಯ ವಿಚಾರವೇನಲ್ಲ. ಇದು ಒಂದು ಸಮುದಾಯದ ಹೋರಾಟ. ಇದರ ಹಿಂದೆ ಆರ್ಎಸ್ಎಸ್ ಇದ್ದರೆ ತಪ್ಪೇನು? ಅಷ್ಟಕ್ಕೂ ದೇಶದಲ್ಲಿ ಆರ್ಎಸ್ಎಸ್ನ್ನು ನಿಷೇಧಿಸಿಲ್ಲ ಎಂದು ಎಲ್ಲರೂ ನೆನಪಿಟ್ಟುಕೊಳ್ಳಬೇಕು'' ಎಂದು ಹೇಳಿದರು.
''ಈ ಹೋರಾಟ ನಾಯಕತ್ವವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ವಹಿಸಿಕೊಳ್ಳಲಿ. ಯಾರು ಈ ಹೋರಾಟ ಸೇರಲು ಬಯಸುತ್ತಾರೆ ಸೇರಲಿ'' ಎಂದು ಹೇಳಿದರು.
''ಸಿದ್ದಾರ್ಥನಗರದ ಕನಕಭವನದಲ್ಲಿ ಡಿ. 29ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ಕುರುಬ ಸಮುದಾಯದ ಮುಖಂಡರ ಸಭೆ ಕರೆಯಲಾಗಿದೆ. ಸಮುದಾಯದ ವಿದ್ಯಾರ್ಥಿಗಳು, ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ನಡೆಸಬೇಕು'' ಎಂದು ಈ ವೇಳೆ ಕರೆ ನೀಡಿದರು.
''ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹೋರಾಟವು ಕುರುಬರ ನಾಯಕತ್ವ ಒಡೆಯುವ ಆರ್ಎಸ್ಎಸ್ ಹುನ್ನಾರ. ಅವರದ್ದೆ ಸರ್ಕಾರವಿದೆ, ಹಾಗಾಗಿ ಯಾರ ವಿರುದ್ದ ಈ ಹೋರಾಟ ಎಂದು ಈಶ್ವರಪ್ಪ ಮತ್ತು ವಿಶ್ವನಾಥ್ ಬಹಿರಂಗಪಡಿಸಬೇಕು'' ಎಂದು ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್ ರವಿವಾರ ಆರೋಪಿಸಿದ್ದರು.