ಬೆಂಗಳೂರು, ಡಿ.27 (DaijiworldNews/PY): "ರೂಪಾಂತರಿ ಕೊರೊನಾ ಹಿನ್ನೆಲೆ ಈ ಬಾರಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ. ಡಿ.28ರ ಸೋಮವಾರದಂದು ಈ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದೇವೆ" ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಾರ್ಟಿಗಳಲ್ಲಿ ಜನರು ಅಂತರವಿಲ್ಲದೆ ಸೇರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನಸೇರಿ ಕೊರೊನಾ ಹರಡಲು ಅವಕಾಶ ಕೊಡಬಾರದು. ಪಾರ್ಟಿಗಳಲ್ಲಿ ಹೆಚ್ಚಿನ ಜನಸಂಖ್ಯೆ ಜನ ಸೇರುವ ಕಾರಣ ನಿಯಂತ್ರಿಸಲು ಕಷ್ಟ. ಈ ಹಿನ್ನೆಲೆ ಸಾರ್ವಜನಿಕ ಪಾರ್ಟಿಗಳಿಗೆ ಅವಕಾಶವಿಲ್ಲ" ಎಂದರು.
"ಬ್ರಿಟನ್ನಿಂದ ಆಗಮಿಸಿದವರ ವಿಳಾಸ ಪತ್ತೆ ಹಚ್ಚುತ್ತಿದ್ದೇವೆ. ಕೊರೊನಾ ಟೆಸ್ಟ್ಗೆ ಎಲ್ಲರನ್ನೂ ಕೂಡಾ ಒಳಪಡಿಸುತ್ತೇವೆ. ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಫೋನ್ ಮುಖೇನ ತಿಳಿಸಿದ್ದೇವೆ" ಎಂದು ಹೇಳಿದರು.
ಗೃಹ ಇಲಾಖೆ ಟೆಂಡರ್ ವಿವಾದದ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, "ಈ ವಿಚಾರದ ಬಗ್ಗೆ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಅವರನ್ನು ಕರೆದು ಮಾತನಾಡಿದ್ದು, ಡಿಜಿಪಿ ಹಾಗೂ ಮುಖ್ಯ ಕಾರ್ಯದರ್ಶಿಗಳು ಆದೇಶ ಮತ್ತು ಉಪದೇಶ ಮಾಡುವ ಕಾರ್ಯವನ್ನು ಮಾಡಲಿದ್ದಾರೆ" ಎಂದು ತಿಳಿಸಿದರು.