ನವದೆಹಲಿ, ಡಿ. 27 (DaijiworldNews/MB) : ರವಿವಾರ ಈ ವರ್ಷದ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಿದರು. 72ನೇ ಆವೃತ್ತಿಯ ಈ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದ ಸಂದರ್ಭ ಕೇಂದ್ರದ ಕೃಷಿ ಕಾಯ್ದೆ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರು ತಟ್ಟೆ ಬಾರಿಸಿದರು.
ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಸಂದರ್ಭ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ವಿರೋಧಿಸಿ ರೈತರು ತಟ್ಟೆ, ಪಾತ್ರೆಗಳನ್ನು ಬಾರಿಸಬೇಕು ಎಂದು ರೈತ ಮುಖಂಡರು ಕರೆ ನೀಡಿದ್ದರು. ಈ ಕರೆಯಂತೆಯೇ ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನಾನಿರತ ರೈತರು ಪ್ರಧಾನಿ ಮನ್ ಕೀ ಬಾತ್ ಕಾರ್ಯಕ್ರಮದ ವೇಳೆ ತಟ್ಟೆಗಳನ್ನು ಬಾರಿಸಿ, ಘೋಷಣೆಯನ್ನು ಕೂಗಿದರು. ಹಾಗೆಯೇ ಬಿಜೆಪಿ ಆಡಳಿತವಿರುವ ಹರ್ಯಾಣದ ರೋಹ್ಟಕ್ನಲ್ಲಿಯೂ ತಟ್ಟೆ ಬಾರಿಸಿ ಪ್ರತಿಭಟನೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದಪಡಿಸುವಂತೆ ಆಗ್ರಹಿಸಿ ಕಳೆದ 32 ದಿನಗಳಿಂದ ದೆಹಲಿಯ ಗಡಿ ಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಎಲ್ಲಾ ಮಾತುಕತೆಗಳು ವಿಫಲವಾಗಿದೆ. ಡಿ.29ರಂದು ಕೇಂದ್ರದೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ರೈತ ಮುಖಂಡರ ತೀರ್ಮಾನ ಮಾಡಿದ್ದಾರೆ.