ಬೀಚ್ ಸ್ವಚ್ಛತಾ ಕಾರ್ಯಕ್ಕಾಗಿ ತಮ್ಮ ಹನಿಮೂನ್ ಮುಂದೂಡಿದ ಬೈಂದೂರಿನ ನವದಂಪತಿಯನ್ನು ಶ್ಲಾಘಿಸಿದ ಮೋದಿ
Sun, Dec 27 2020 01:00:49 PM
ನವದೆಹಲಿ, ಡಿ. 27 (DaijiworldNews/MB) : ಬೀಚ್ ಸ್ವಚ್ಛತಾ ಕಾರ್ಯಕ್ಕಾಗಿ ತಮ್ಮ ಹನಿಮೂನ್ ಮುಂದೂಡಿದ ಬೈಂದೂರಿನ ನವದಂಪತಿ ಅನುದೀಪ್ ಹೆಗ್ಡೆ ಮತ್ತು ಮಿನುಷ ಕಾಂಚನ್ರನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದಾರೆ.
ಅನುದೀಪ್ ಡಿಜಿಟಲ್ ಮಾರ್ಕೆಟಿಂಗ್ನಲ್ಲಿದ್ದರೆ, ಮಿನುಷಾ ಔಷಧೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಈ ಜೋಡಿಯು ನವೆಂಬರ್ 18 ರಂದು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ದಾಂಪತ್ಯ ಜೀವನದ ನೆನಪುಗಳು ಅಚ್ಚಳಿಯದಂತೆ ನೆನಪಿನಲ್ಲಿ ಉಳಿಯಬೇಕು ಎಂಬ ಉದ್ದೇಶದಿಂದ ಈ ದಂಪತಿಯು ಸೋಮೇಶ್ವರ ಕಡಲ ತೀರವನ್ನು ಸ್ವಚ್ಛಗೊಳಿಸಲು ನಿರ್ಧರಿಸಿದರು. ಈ ದಂಪತಿಗಳು ಮೊದಲ ಏಳು ದಿನಗಳಲ್ಲಿ ಅವರು 500 ಕೆಜಿ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದ್ದು ಬಳಿಕ ಎರಡು ದಿನ ಸ್ಥಳೀಯರು ಕೂಡಾ ಕೈ ಜೋಡಿಸಿದ್ದಾರೆ. ಒಟ್ಟಾರೆಯಾಗಿ ಸುಮಾರು 700 ರಿಂದ 800 ಕೆ.ಜಿ. ತ್ಯಾಜ್ಯವನ್ನು ಈ ಜೋಡಿಯು ಸಂಗ್ರಹಿಸಿದ್ದಾರೆ. ನವೆಂಬರ್ 27 ರಿಂದ ಈ ದಂಪತಿ ಸೋಮೇಶ್ವರ ಕಡಲತೀರದಲ್ಲಿದ್ದ ತ್ಯಾಜ್ಯ ವಸ್ತುಗಳನ್ನು ಹೆಕ್ಕಿ ಬೀಚ್ ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದಾರೆ.
ಈ ಜೋಡಿಯ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿಯವರು, ''ಉಡುಪಿ ಮೂಲದ ನವವಿವಾಹಿತರಾದ ಅನುದೀಪ್ ಹಾಗೂ ಮಿನುಶಾ ಜೋಡಿಯನ್ನು ಅಭಿನಂದಿಸುತ್ತೇನೆ. ಇವರು ಸೋಮೇಶ್ವರ ಬೀಚ್ ನಲ್ಲಿ 800 ಕೆಜಿ ಪ್ಲಾಸ್ಟಿಕ್ ಮತ್ತಿತರ ಕಸವನ್ನು ಹೆಕ್ಕಿ ಸ್ವಚ್ಚ ಭಾರತ ಅಭಿಯಾನಕ್ಕೆ ಕೈ ಜೋಡಿಸಿರುತ್ತಾರೆ'' ಎಂದು ಹೇಳಿದ್ದಾರೆ.