ನವದೆಹಲಿ, ಡಿ.27 (DaijiworldNews/PY): "ಬಿಜೆಪಿಯ ಕೆಲ ನಾಯಕರು ಶೀಘ್ರದಲ್ಲೇ ಎನ್ಸಿಪಿ ಸೇರ್ಪಡೆಯಾಗಲಿದ್ದು, ಕೆಲವೇ ದಿನಗಳಲ್ಲಿ ಬಿಜೆಪಿ ಮನೆಯಿಂದ ಹೊರ ಬರುವವರು ಯಾರು ಎಂದು ತಿಳಿಯಲಿದೆ" ಎಂದು ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಹೇಳಿದ್ದಾರೆ.
"ಈ ಹಿಂದೆ ಬಿಜೆಪಿಗೆ ಸೇರ್ಪಡೆಯಾದ ಹಲವು ನಾಯಕರು ಬಿಜೆಪಿ ಆಡಳಿತದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಮುಂಬರುವ ದಿನಗಳಲ್ಲಿ ಎನ್ಸಿಪಿ ಸೇರುವ ವಿಚಾರದ ಬಗ್ಗೆ ಅವರು ಚಿಂತನೆ ನಡೆಸಿದ್ದು, ಚರ್ಚೆಯೂ ನಡೆಯುತ್ತಿದೆ. ಪುಣೆ ಹಾಗೂ ಪಿಂಪರಿ ಚಿಂಚಾವಾಡದ ಕೆಲವು ನಾಯಕರು ಪಕ್ಷ ಸೇರುವ ವಿಚಾರದ ಬಗ್ಗೆ ಮಾತನಾಡಿದ್ದು, ಅವರೆಲ್ಲರನ್ನೂ ಕೂಡಾ ಶೀಘ್ರವೇ ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದೇವೆ" ಎಂದಿದ್ದಾರೆ.
ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ಸಚಿವ ಜಯಂತ್ ಪಾಟೀಲ್, "ಬಿಜೆಪಿಯ ಹತ್ತಕ್ಕೂ ಅಧಿಕ ಶಾಸಕರು ಬಿಜೆಪಿ ತೊರೆಯಿದ್ದಾರೆ. ಎನ್ಸಿಪಿ ಆ ಎಲ್ಲಾ ಶಾಸಕರನ್ನೂ ಕೂಡಾ ಬರಮಾಡಿಕೊಳ್ಳುವ ವಿಚಾರದ ಬಗ್ಗೆ ತೀರ್ಮಾನ ಮಾಡಲಿದೆ" ಎಂದು ಹೇಳಿದ್ದರು.