ನವದೆಹಲಿ, ಡಿ.27 (DaijiworldNews/PY): "ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮುಖೇನ ಮುಂದಿನ ದಿನಗಳಲ್ಲಿ ಜಮ್ಮು-ಕಾಶ್ಮೀರದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಲಿದೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪಿಎಂಜೆಎವೈ ಸೆಹತ್ ಯೋಜನೆಯಯನ್ನು ವಿಡಿಯೊಕಾನ್ಫೆರನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, "ಜಮ್ಮು-ಕಾಶ್ಮೀರದ ಆಡಳಿತದಲ್ಲಿ ಪಿಎಂಜೆಎವೈ ಸೆಹತ್ ಯೋಜನೆಯು ಮತ್ತೊಂದು ಗರಿ. ಪ್ರತಿಯೋರ್ವ ನಾಗರಿಕರಿಗೂ ಈ ಯೋಜನೆ ಲಭ್ಯವಾಗಲಿರುವ ಮೊದಲ ರಾಜ್ಯ/ಕೇಂದ್ರಾಡಳಿತ ಪ್ರದೇಶವಾಗಲಿದೆ. ಈ ಯೋಜನೆಯು ಪ್ರಧಾನಿ ಮಂತ್ರಿ ಹಾಗು ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮಾಡಿರುವ ಪ್ರಯತ್ನದ ಫಲವಾಗಿದೆ" ಎಂದು ತಿಳಿಸಿದ್ದಾರೆ.
"ಐದು ಲಕ್ಷ ರೂ.ವರೆಗಿನ ಎಲ್ಲಾ ಸೌಲಭ್ಯಗಳನ್ನು ಸುಮಾರು 15 ಲಕ್ಷ ಕುಟುಂಬಗಳು ಉಚಿತವಾಗಿ ಪಡೆಯಲಿದ್ದಾರೆ. ಈ ಯೋಜನೆಯನ್ನು ಆಯುಷ್ಮಾನ್ ಭಾರತ್ ಯೋಜನೆಯ ಹೆಸರಿನಲ್ಲಿ ಬಡವರಿಗೆ ಮಾತ್ರವೇ ದೇಶದಾದ್ಯಂತ ಜಾರಿಗೆ ತರಲಾಗಿದೆ" ಎಂದು ತಿಳಿಸಿದ್ದಾರೆ.
"ಈ ಯೋಜನೆಗೆ ಜಮ್ಮು-ಕಾಶ್ಮೀರದಲ್ಲಿ 229 ಸರ್ಕಾರಿ ಹಾಗೂ 35 ಖಾಸ ಆಸ್ಪತ್ರೆಗಳನ್ನು ಸೇರ್ಪಡೆ ಮಾಡಲಾಗಿದೆ" ಎಂದಿದ್ದಾರೆ.