ಶ್ರೀನಗರ, ಡಿ. 27 (DaijiworldNews/MB) : ಶೋಪಿಯಾನ್ ಜಿಲ್ಲೆಯಲ್ಲಿ ನಡೆದ "ನಕಲಿ" ಎನ್ಕೌಂಟರ್ನಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಸೇನಾ ಕ್ಯಾಪ್ಟನ್ ಸೇರಿದಂತೆ ಮೂವರು ವಿರುದ್ಧ ಜಮ್ಮು ಕಾಶ್ಮೀರ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಚಾರ್ಜ್ಶೀಟ್ನ್ನು ಪ್ರಧಾನ ಜಿಲ್ಲಾ ನ್ಯಾಯಾಲಯ ಮತ್ತು ಶೋಪಿಯಾನ್ನ ಸೆಷನ್ಸ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಈ ಪ್ರಕರಣದ ಮೂವರು ಆರೋಪಿಗಳು 62 ರಾಷ್ಟ್ರೀಯ ರೈಫಲ್ಸ್ನ ಕ್ಯಾಪ್ಟನ್ ಭೂಪಿಂದರ್, ಪುಲ್ವಾಮಾ ನಿವಾಸಿ ಬಿಲಾಲ್ ಅಹ್ಮದ್ ಮತ್ತು ಶೋಪಿಯಾನ್ ನಿವಾಸಿ ತಬೀಶ್ ಅಹ್ಮದ್" ಎಂದು ಈ ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಖ್ಯಸ್ಥರೂ ಆದ ಉಪ ಪೊಲೀಸ್ ವರಿಷ್ಠಾಧಿಕಾರಿ ವಜಾಹತ್ ಹುಸೇನ್ ಹೇಳಿದ್ದಾರೆ.
ಜುಲೈ 18, 2020 ರ ಅಮ್ಶಿಪೋರಾ (ಶೋಪಿಯಾನ್) ದಲ್ಲಿ ನಡೆದ ಎನ್ಕೌಂಟರ್ ಬಗ್ಗೆ ಮಾಹಿತಿ ಸಂಗ್ರಹ ಪೂರ್ಣಗೊಂಡಿದೆ. ಮೂವರು ಕಾರ್ಮಿಕರಿಗೆ ಯಾವುದೇ ಉಗ್ರಗಾಮಿ ಚಟುವಟಿಕೆಯೊಂದಿಗೆ ಸಂಬಂಧವಿಲ್ಲದಿದ್ದರೂ ಅವರನ್ನು ಕೊಲ್ಲಲಾಗಿದೆ ಎಂದು ಸೇನೆಯು ಗುರುವಾರ ಹೇಳಿಕೆ ನೀಡಿದೆ.
ಈ ಪ್ರಕರಣದಲ್ಲಿ ಮುಂದಿನ ಕ್ರಮಗಳ ಅಗತ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಲು ಕಾನೂನು ತಜ್ಞರು ಸಾಕ್ಷ್ಯಗಳ ಹೇಳಿಕೆ ಪರಿಶೀಲಿಸುತ್ತಿದ್ದಾರೆ ಎಂದು ಸೇನೆಯು ತಿಳಿಸಿದೆ.
ಜಮ್ಮುವಿನ ರಾಜೌರಿ ಜಿಲ್ಲೆಗೆ ಸೇರಿದ ಮೂವರು ಹತ್ಯೆಗೀಡಾದ ಕಾರ್ಮಿಕರ ಸಂಬಂಧಿಕರು ತೀವ್ರ ಒತ್ತಡ ಹೇರಿದ ಬಳಿಕ ಪೊಲೀಸರು ಮೂರು ಕುಟುಂಬಗಳ ಡಿಎನ್ಎ ಪರೀಕ್ಷೆ ನಡೆಸಿದ್ದು ಹತ್ಯೆಗೀಡಾದವರು ಸ್ಥಳೀಯರು ಎಂದು ತಿಳಿದುಬಂದಿದೆ.
ಮೂವರು ವಿದೇಶಿ ಭಯೋತ್ಪಾದಕರು ಎಂದು ಎನ್ಕೌಂಟರ್ ನಡೆಸಿದವರು ಹೇಳಿಕೊಂಡಿದ್ದು, ಅವರ ಬಳಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೂಡಾ ಹೇಳಿಕೊಂಡಿದ್ದರು.
ಹತ್ಯೆಗೀಡಾದ ಮೂವರು ನಾಗರಿಕರನ್ನು ಅಬ್ರಾರ್ ಅಹ್ಮದ್ (25), ಮೊಹಮ್ಮದ್ ಇಬ್ರಾರ್, 16 ಮತ್ತು ಇಮ್ತಿಯಾಜ್ ಅಹ್ಮದ್ (20) ಎಂದು ಗುರುತಿಸಲಾಗಿದೆ. ಅವರ ಅಂತಿಮ ಸಂಸ್ಕಾರಕ್ಕಾಗಿ ಮೃತ ದೇಹವನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿತ್ತು.