ಮೈಸೂರು, ಡಿ. 27 (DaijiworldNews/MB) : ''ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ಬಗ್ಗೆ ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಿ, ರೈತರನ್ನು ಎತ್ತಿಕಟ್ಟುವ ಪಿತೂರಿ ನಡೆದಿದೆ'' ಎಂದು ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಉಪಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಆರೋಪಿಸಿದರು.
ಶನಿವಾರ ಸಾಮಾಜಿಕ ನ್ಯಾಯ ವೇದಿಕೆ ವತಿಯಿಂದ ಆಯೋಜನೆ ಮಾಡಲಾಗಿದ್ದ 'ಬೆಂಕಿಯ ಚೆಂಡು ಕುಯಿಲಿ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ''ಈ ಕಾಯ್ದೆಗಳ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಲಾಗಿದೆ. ಈ ಕಾಯ್ದೆಗಳಲ್ಲಿ ಯಾವುದೇ ಗೊಂದಲಕಾರಿ ವಿಷಯಗಳು ಇಲ್ಲ'' ಎಂದು ಹೇಳಿದರು.
''ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಘರ್ಷಣೆ ಉಂಟು ಮಾಡುವ ನಿಟ್ಟಿನಲ್ಲೇ ಕಾಯ್ದೆಯ ವಿರುದ್ದ ಪ್ರತಿಭಟಿಸಲು ದೆಹಲಿಯ ಗಡಿ ಭಾಗದಲ್ಲಿ 7–8 ಲಕ್ಷ ರೈತರನ್ನು ಸೇರಿಸಲಾಗಿದೆ'' ಎಂದು ದೂರಿದ ಅವರು, ''ಈ ಕಾಯ್ದೆಯಲ್ಲಿ ಯಾವುದೇ ಗೊಂದಲ ಉಂಟು ಮಾಡುವ ಅಂಶವಿಲ್ಲ. ಎಲ್ಲಾ ಸ್ಪಷ್ಟವಾಗಿದೆ'' ಎಂದರು.