ಮಂಗಳೂರು, ಡಿ. 27 (DaijiworldNews/MB) : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಅಂತಿಮ (ಎರಡನೇ) ಹಂತದ ಗ್ರಾಮ ಪಂಚಾಯತ್ ಚುನಾವಣೆ ಆರಂಭವಾಗಿದೆ.
ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್ಗಳಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಬಿರುಸಿನ ಮತದಾನ ಆರಂಭಗೊಂಡಿದೆ. ಇನ್ನೂ ಕೆಲವು ಬೂತ್ಗಳಲ್ಲಿ ಕೊರೆಯುವ ಚಳಿಗೆ ಮಂದಗತಿಯ ಮತದಾನ ಕಂಡು ಬರುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಕಡಬ ಹಾಗೂ ಸುಳ್ಯ ತಾಲೂಕಿನ 114 ಪಂಚಾಯತ್ಗಳ 1,500 ಗ್ರಾ.ಪಂ ಸ್ಥಾನಕ್ಕೆ ಮತದಾನ ನಡೆಯುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಕುಂದಾಪುರ, ಕಾರ್ಕಳ ಮತ್ತು ಕಾಪು ತಾಲೂಕುಗಳ 86 ಗ್ರಾಮ ಪಂಚಾಯತ್ನ 1,178 ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 41, ಉಡುಪಿಯಲ್ಲಿ 65 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದೆ.
ಚುನಾವಣಾ ಕರ್ತವ್ಯಕ್ಕೆ ಬೆಳ್ತಂಗಡಿಯಲ್ಲಿ 1284, ಪುತ್ತೂರು 664, ಕಡಬ 596, ಸುಳ್ಯದಲ್ಲಿ 584 ಸೇರಿ ದ.ಕ.ದಲ್ಲಿ ಒಟ್ಟು 3128 ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕುಂದಾಪುರದಲ್ಲಿ 1192, ಕಾರ್ಕಳ 848, ಕಾಪುವಿನಲ್ಲಿ 624 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.