ಬೆಂಗಳೂರು, ಡಿ.26 (DaijiworldNews/PY): ರಾಜ್ಯಾದ್ಯಂತ ಮೊದಲನೇ ಹಂತದ ಗ್ರಾ.ಪಂ.ಚುನಾವಣೆ ಪೂರ್ತಿಯಾದ ಬಳಿಕ ಚುನಾವಣಾ ಆಯೋಗವು ಎರಡನೇ ಹಂತದ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಡಿ.27ರ ರವಿವಾರದಂದು 109 ತಾಲೂಕುಗಳ 2,709 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದೆ.
ಸಾಂದರ್ಭಿಕ ಚಿತ್ರ
ಮತದಾನವು ರವಿವಾರ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ನಾಳೆ ನಡೆಯಲಿರುವ ಎರಡನೇ ಹಂತದ ಚುನಾವಣೆಯಲ್ಲಿ 2,709 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದೆ. ಪಂಚಾಯತ್ಗಳ ಒಟ್ಟು ಸ್ಥಾನಗಳು 43,291 ಆಗಿದ್ದು, ಈ ಪೈಕಿ ಈಗಾಗಲೇ 3,697 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯದಲ್ಲಿ ಸುಮಾರು 1,47,649 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ 34,115 ಅಭ್ಯರ್ಥಿಗಳು ನಾಮಪತ್ರ ವಾಪಾಸ್ಸು ಪಡೆದುಕೊಂಡಿದ್ದಾರೆ. ಇನ್ನು ಸುಮಾರು 1,05,431 ಮಂದಿ ಅಂತಿಮ ಕಣದಲ್ಲಿದ್ದಾರೆ.
ಇನ್ನು ಕೊರೊನಾ ನಡುವೆ ಚುನಾವಣೆ ನಡೆಯುತ್ತಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಮತದಾನದಿಂದ ಯಾರೂ ಕೂಡಾ ಹೊರಗುಳಿಯಬಾರದು ಎಂದು ಕ್ರಮ ಕೈಗೊಂಡಿದ್ದು, ಕೊನೆಯ ಒಂದು ಗಂಟೆಯ ಅವಕಾಶವನ್ನ ಕೊರೊನಾ ಸೋಂಕಿತರಿಗೆ ಮತದಾನ ಮಾಡಲಿ ನೀಡಲಾಗುತ್ತಿದೆ.
10 ಸಾವಿರಕ್ಕೂ ಹೆಚ್ಚು ಚುನಾವಣಾ ಅಧಿಕಾರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಒಟ್ಟು 20,728 ಮತಗಟ್ಟೆಗಳಿದ್ದು, 1,24,368 ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಈ ಬಾರಿಯ ಚುನಾವಣೆಯ ಸಂದರ್ಭ ಸುಮಾರು 35 ಸಾವಿರಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖಾ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.
ಕೊರೊನಾ ಹಿನ್ನೆಲೆ ಹೆಚ್ಚು ಜನಸಂದಣಿಯಾಗದಂತೆ ಹಾಗೂ ಸಿಬ್ಬಂದಿಗಳ ಕೊರತೆಯಾಗದಂತೆ ಯೋಜಿಸಿ ಮತದಾನ ನಡೆಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅವಶ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.