ಬೆಂಗಳೂರು, ಡಿ.26 (DaijiworldNews/PY): "ಹೊಸ ಬಗೆಯ ಪ್ರಭೇದದ ಕೊರೊನಾ ನಿಯಂತ್ರಣಕ್ಕೆ ಗೃಹ ಇಲಾಖೆಯ ಜೊತೆ ಸಭೆ ನಡೆಸಿ ಹೊಸ ಮಾರ್ಗಸೂಚಿಯನ್ನು ರೂಪಿಸಲಾಗುವುದು" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರೂಪಾಂತರಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹೊಸ ವರ್ಷಕ್ಕೆ ನೂತನ ಮಾರ್ಗಸೂಚಿಯನ್ನು ರೂಪಿಸಬೇಕಿದೆ. ಹೊಸ ಮಾರ್ಗಸೂಚಿ ರೂಪಿಸಲು ಗೃಹ ಇಲಾಖೆಯೊಂದಿಗೆ ಸಭೆ ನಡೆಸಿ, ಬಳಿಕ ಮಾರ್ಗಸೂಚಿ ರೂಪಿಸಲಾಗುವುದು" ಎಂದು ತಿಳಿಸಿದರು.
"ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದ್ದು, ಇದನ್ನು ಪ್ರಾಯೋಗಿಕವಾಗಿ ಕೂಡಾ ಪಡೆಯಬಹುದಾಗಿದೆ. ಈ ಲಸಿಕೆಯನ್ನು ಪಡೆದು ಪ್ರಯೋಗದಲ್ಲಿ ಭಾಗವಹಿಸಿ ಎಂದು ಕೊರೊನಾ ವಾರಿಯರ್ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ತಿಳಿಸಿದ್ದೇನೆ" ಎಂದರು.
"ಇಡೀ ದೇಶದಲ್ಲಿ ಬ್ರಿಟನ್ನಿಂದ ಒಟ್ಟು ಸುಮಾರು 38,500 ಮಂದಿ ವಾಪಾಸ್ಸಾಗಿದ್ದಾರೆ. ಮಾದರಿ ಹಾಗೂ ವರದಿಗಳನ್ನು ಕಲೆಹಾಕಿ ಅಂತಿಮ ವರದಿಯನ್ನು ಐಸಿಎಂಆರ್ ಪ್ರಕಟಿಸಲಿದೆ" ಎಂದು ಹೇಳಿದರು.
"ಬ್ರಿಟನ್ನಿಂದ ಆಗಮಿಸಿದ 2,500 ಮಂದಿಯ ಪೈಕಿ 1,638 ಮಂದಿಯ ಕೊರೊನಾ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 14 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮಾದರಿಗಳನ್ನು ನಿಮ್ಹಾನ್ಸ್ ಲ್ಯಾಬ್ಗೆ ಕಳುಹಿಸಲಾಗಿದೆ. ಈ ಮಾದರಿಗಳನ್ನು ಜೆನೆಟಿಕ್ ಸೀಕ್ವೆನ್ಸಿಂಗ್ ಮಾಡಲಾಗುತ್ತಿದ್ದು, ಇದಕ್ಕೆ 48 ಗಂಟೆಗಳ ಕಾಲ ಬೇಕಾಗುತ್ತದೆ. ಇದರ ವರದಿ ಬಂದ ಬಳಿಕ ಈ ವರದಿಯನ್ನು ಕೇಂದ್ರ ಸರ್ಕಾರ ಕೊಡಲಾಗುವುದು" ಎಂದು ತಿಳಿಸಿದರು.