ಮುಂಬೈ,ಡಿ.26 (DaijiworldNews/HR): ಕೇಂದ್ರ ಸರ್ಕಾರ ರೈತರ ಪ್ರತಿಭಟನೆಯ ಬಗ್ಗೆ ಅಸಡ್ಡೆ ತೋರುತ್ತಿದ್ದು, ಪರಿಣಾಮಕಾರಿಯಲ್ಲದ ಪ್ರತಿಪಕ್ಷವೂ ಸರ್ಕಾರದ ಈ ನಿರಾಸಕ್ತಿಗೆ ಕಾರಣವಾಗಿದ್ದು, ರಾಷ್ಟ್ರಮಟ್ಟದ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಈಗ ದುರ್ಬಲ ಮತ್ತು ಒಡೆದ ಮನೆಯಾಗಿದೆ ಎಂದು ಶಿವಸೇನಾ ಹೇಳಿದೆ.
ಈ ಕುರಿತು ಶಿವಸೇನೆಯು ಪಕ್ಷದ ಮುಖವಾಣಿ 'ಸಾಮ್ನಾ'ದಲ್ಲಿ ಪ್ರಸ್ತಾಪಿಸಿದ್ದು, " ಶಿವಸೇನಾ ಸೇರಿದಂತೆ ಎಲ್ಲ ಬಿಜೆಪಿ ವಿರೋಧಿ ಪಕ್ಷಗಳು ಯುಪಿಎ ಮೈತ್ರಿಕೂಟದ ಅಡಿಯಲ್ಲಿ ಒಂದಾಗಿ, ಪ್ರಬಲ ಪರ್ಯಾಯವೊಂದಕ್ಕಾಗಿ ಈ ಕ್ರಮಕ್ಕೆ ಮುಂದಾಗಬೇಕು" ಎಂದು ಕರೆ ನೀಡಿದೆ.
ಇನ್ನು "ಕೇಂದ್ರ ಸರ್ಕಾರವನ್ನು ದೂರುವ ಬದಲಾಗಿ ಪ್ರಮುಖ ಪ್ರತಿಪಕ್ಷವು ತನ್ನ ನಾಯಕತ್ವ ಸಮಸ್ಯೆ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು" ಎಂದಿದೆ.
"ರಾಹುಲ್ ಗಾಂಧಿ ವೈಯಕ್ತಿಕವಾಗಿ ಹೋರಾಟ ಮಾಡುತ್ತಿದ್ದಾರೆ, ಆದರೆ ಏನೋ ಕೊರತೆ ಇದ್ದು ಯುಪಿಎ ಮೈತ್ರಿಕೂಟದ ಸದ್ಯದ ಸ್ಥಿತಿ ಸ್ವಯಂಸೇವಾ ಸಂಸ್ಥೆಯಂತಾಗಿದೆ. ಯುಪಿಎಯ ಇತರ ಪಕ್ಷಗಳೂ ರೈತರ ಪ್ರತಿಭಟನೆಯನ್ನು ಗಂಭೀರವಾಗಿ ಸ್ವೀಕರಿಸಿದಂತಿಲ್ಲ" ಎಂದು ಉಲ್ಲೇಖಿಸಿದೆ.