ನವದೆಹಲಿ,ಡಿ.26 (DaijiworldNews/HR): "ದೆಹಲಿಯಲ್ಲಿ ಕೆಲವರು ನನಗೆ ಪ್ರಜಾಪ್ರಭುತ್ವದ ಪಾಠಗಳನ್ನು ಕಲಿಸಲು ಬಯಸುತ್ತಿದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.
ನಮ್ಮ ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ, ಪ್ರಧಾನಿ ವಿರುದ್ಧ ಯಾರೇ ಮಾತನಾಡಿದರೂ ಅವರಿಗೆ ಭಯೋತ್ಪಾದಕರೆಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಮೋಹನ್ ಭಾಗವತ್ ವಿರುದ್ಧ ನಿಂತರೂ ಹೀಗೆ ಆಗುತ್ತಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಜನರಿಗೆ ಆರೋಗ್ಯ ವಿಮೆಗಾಗಿ ಆಯುಷ್ಮಾನ್ ಭಾರತ್ ಯೋಜನೆ ಉದ್ಘಾಟಿಸಿದ ಬಳಿಕ ಮಾತನಾಡಿದ ಮೋದಿ, "ದೆಹಲಿಯಲ್ಲಿ ಪ್ರತಿಸಲವೂ ನನ್ನನ್ನು ಕೆಣಕುವ ಮತ್ತು ಅವಮಾನಿಸುವ ಜನರಿದ್ದಾರೆ. ಅವರು ನನಗೆ ಪ್ರಜಾಪ್ರಭುತ್ವದ ಪಾಠಗಳನ್ನು ಕಲಿಸಲು ಇಚ್ಚಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಡಿಡಿಸಿ ಚುನಾವಣೆಗಳ ಫಲಿತಾಂಶವನ್ನು ಅವರಿಗೆ ಪ್ರಜಾಪ್ರಭುತ್ವದ ಉದಾಹರಣೆಯಾಗಿ ತೋರಿಸಬೇಕೆಂದು ನಾನು ಬಯಸುತ್ತೇನೆ" ಎಂದರು.
ಇನ್ನು ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಸಂಸ್ಥೆ ಚುನಾವಣೆಗಳು ಪ್ರಜಾಪ್ರಭುತ್ವದ ಬೇರನ್ನು ಬಲಪಡಿಸಿದ್ದು, 8 ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿದ ಕಾಶ್ಮೀರದ ಜನತೆಗೆ ಮೋದಿ ಅಭಿನಂದನೆ ತಿಳಿಸಿದ್ದಾರೆ.