ಪಾಲಕ್ಕಾಡ್, ಡಿ. 26 (DaijiworldNews/MB) : ಜೋಡಿಯೊಂದು ಕುಟುಂಬಸ್ಥರ ವಿರೋಧದ ನಡುವೆಯೂ ವಿವಾಹವಾಗಿದ್ದು, ಯುವತಿಯ ಕುಟುಂಬಸ್ಥರು ನಿರಂತರವಾಗಿ ಬೆದರಿಕೆ ಹಾಕಿ ಬಳಿಕ ಯುವಕನನ್ನು ಹತ್ಯೆಗೈದ ಘಟನೆ ಪಾಲಕ್ಕಾಡ್ ನ ತೇನ್ ಕುರಿಶ್ಶಿ ಸಮೀಪ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದ ತಿಳಿಸಿದೆ.
ಹತ್ಯೆಯಾದ ಯುವಕನನ್ನು ಅನೀಶ್ (27) ಎಂದು ಗುರುತಿಸಲಾಗಿದೆ.
ಅನೀಶ್ ಕೆಲಸ ಮುಗಿಸಿ ಮನೆಗೆ ವಾಪಾಸ್ ಬರುತ್ತಿದ್ದ ವೇಳೆ ಯುವತಿಯ ತಂದೆ ಪ್ರಭು ಕುಮಾರ್ ಹಾಗೂ ಮಾವ ಸುರೇಶ್ ಎಂಬವರು ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ಅನೀಶ್ನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಯುವತಿಯ ಕುಟುಂಬ ಶ್ರೀಮಂತರಾಗಿದ್ದು ಈ ಹಿನ್ನೆಲೆ ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ ಈ ಜೋಡಿಯು ಕುಟುಂಬದ ವಿರೋಧದ ನಡುವೆಯೂ ವಿವಾಹವಾಗಿದ್ದು ಬಳಿಕ ಕುಟುಂಬಸ್ಥರಿಂದ ಬೆದರಿಕೆ ಕರೆಗಳು ಬರಲಾರಂಭಿಸಿದೆ ಎಂದು ಹೇಳಲಾಗಿದೆ.