ಶಿವಮೊಗ್ಗ, ಡಿ.26 (DaijiworldNews/PY): "ಯತ್ನಾಳ್ ಅವರು ಹೇಳಿಕೆಗಳನ್ನು ನೀಡಿ ಪೇಚಿಗೆ ಸಿಲುಕುತ್ತಾರೆ. ಹಾಗಾಗಿ ಅವರ ಹೇಳಿಕೆಗಳನ್ನು ಬಿಜೆಪಿ ಮಾತ್ರವಲ್ಲ ಜನರೂ ಕೂಡಾ ಪರಿಗಣಿಸುತ್ತಿಲ್ಲ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯತ್ನಾಳ್ ಅವರು ಒಳ್ಳೆಯ ನಾಯಕ. ಕಠೋರ ಹಿಂದುತ್ವವಾದಿ. ಆದರೆ, ಅವರು ಹೇಳಿಕೆಗಳನ್ನು ನೀಡಿ ಪೇಚಿಕೆ ಸಿಲುಕುತ್ತಾರೆ. ಹಾಗಾಗಿ ಇವರ ಮಾತನ್ನು ಯಾರೂ ಸಹ ಪರಿಗಣಿಸುತ್ತಿಲ್ಲ" ಎಂದರು.
"ರಾಜ್ಯದ ನಾಯಕರು ಯತ್ನಾಳ್ ಅವರ ಹೇಳಿಕೆಗಳನ್ನು ಗಮನಿಸುತ್ತಿದ್ದಾರೆ. ಅದನ್ನು ಸರಿಪಡಿಸುತ್ತಾರೆ. ಅವರೊಂದಿಗೆ ನಾನು ಕೂಡಾ ಮಾತನಾಡಿದ್ದೆ. ಆದರೂ ಕೂಡಾ ಅವರು ಹೀಗೆ ಮಾತನಾಡುತ್ತಿದ್ದಾರೆ" ಎಂದು ಹೇಳಿದರು.
"ಯತ್ನಾಳ್ ಅವರು ಕೂಡಾ ನಮ್ಮ ಪ್ರಮುಖ ನಾಯಕರು. ಅವರಿಗೆ ಪಕ್ಷ ಹಾಗೂ ಸರ್ಕಾರಕ್ಕೆ ಆಗುವ ತೊಂದರೆಗಳು ತಿಳಿದಿವೆ. ಆದರೆ, ಅವರ ವಿರುದ್ದವಾಗಿ ಯಾವುದೇ ರೀತಿಯಾದ ಕ್ರಮ ತೆಗೆದುಕೊಳ್ಳುವುದಿಲ್ಲ. ಅವರನ್ನು ಕರೆದು ಮಾತುಕತೆ ನಡೆಸುತ್ತೇವೆ" ಎಂದರು.
ಕೃಷಿ ಕಾನೂನುಗಳ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಹೋರಾಟ ಒಂದು ರಾಜಕೀಯ ಷಡ್ಯಂತ್ರವಾಗಿದೆ. ದೇಶದ ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿಯೂ ಕೂಡಾ ಮಾರಾಟ ಮಾಡಬಹುದಾಗಿದೆ. ಇದಕ್ಕಾಗಿ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೇ, ಇದಕ್ಕೆ ರೈತರೂ ಕೂಡಾ ಸಮ್ಮತಿ ನೀಡಿದ್ದಾರೆ. ಇದು ಕಾಂಗ್ರೆಸ್ ಪೇರಿತವಾದ ರೈತರ ಪ್ರತಿಭಟನೆಯಾಗಿದೆ" ಎಂದು ಹೇಳಿದರು.
"ಕೇಂದ್ರ ಸಚಿವ ಅಮಿತ್ ಶಾ ಅವರು ಭದ್ರಾವತಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಜನವರಿಯಲ್ಲಿ ಅವರು ಬರಲಿದ್ದು, ಇನ್ನೂ ಕೂಡಾ ದಿನಾಂಕ ನಿಗದಿಯಾಗಿಲ್ಲ. ಅವರು ಆರ್ಎಎಎಫ್ ಘಟಕದ ಸ್ಥಾಪನೆಯ ಸಂಬಂಧ ಭೇಟಿ ನೀಡುವ ನಿರೀಕ್ಷೆ ಇದೆ" ಎಂದರು.