ಭೋಪಾಲ್, ಡಿ. 26 (DaijiworldNews/MB) : ಬಲವಂತದ ಧಾರ್ಮಿಕ ಮತಾಂತರವನ್ನು ತಡೆಯುವ ನಿಟ್ಟಿನಲ್ಲಿ ಮಧ್ಯಪ್ರದೇಶದ ಸಚಿವ ಸಂಪುಟವು ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಿದೆ. ಈ ಮಸೂದೆಯ ಅನ್ವಯ ಬಲವಂತದ ಧಾರ್ಮಿಕ ಮತಾಂತರ ಮಾಡಿದವರಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಧರ್ಮ ಸ್ವಾತಂತ್ರ ಮಸೂದೆ 2020ನ್ನು ಮಂಡಿಸಲಾಯಿತು. ಸಚಿವ ಸಂಪುಟವು ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಈ ಮಸೂದೆ ಪ್ರಕಾರ ಧಾರ್ಮಿಕ ಮತಾಂತರಕ್ಕೆ ಒತ್ತಾಯ ಮಾಡುವವರಿಗೆ 1-5 ವರ್ಷಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ 25,000 ರೂ. ದಂಡವನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಮತಾಂತರವಾದ ವ್ಯಕ್ತಿಯು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದರೆ ಕನಿಷ್ಠ 1 ಲಕ್ಷ ದಂಡ ಹಾಗೂ ಕನಿಷ್ಠ 2-10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವ ಅವಕಾಶ ಈ ಮಸೂದೆ ನೀಡುತ್ತದೆ.
ಹಾಗೆಯೇ ಯಾರಾದರೂ ಮತಾಂತರವಾಗಲೂ ಸ್ವಯಂ ಇಚ್ಛಿಸಿದ್ದರೆ, ಎರಡು ತಿಂಗಳ ಮುನ್ನವೇ ಈ ಬಗ್ಗೆ ಮಾಹಿತಿ ನೀಡಬೇಕಾಗಿದೆ. ಒಂದು ವೇಳೆ ಎರಡು ತಿಂಗಳ ಮೊದಲು ಮಾಹಿತಿ ನೀಡದಿದ್ದರೆ, ಆ ಜೋಡಿಯ ವಿವಾಹವನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ.
ಈ ಹಿಂದೆ ಬಿಜೆಪಿ ಆಡಳಿತವಿರುವ ಉತ್ತರಪ್ರದೇಶದಲ್ಲಿ ಮತಾಂತರ ವಿರೋಧಿ ಮಸೂದೆಯನ್ನು ಅಂಗೀಕರಿಸಲಾಗಿದ್ದು ಈ ಕಾಯ್ದೆಯಡಿ ಈಗಾಗಲೇ ಹಲವು ಪ್ರಕರಣ ದಾಖಲಾಗಿದೆ. ಹಾಗೆಯೇ ಬಂಧನ ಕೂಡಾ ನಡೆದಿದೆ.