ಬೆಂಗಳೂರು, ಡಿ. 26 (DaijiworldNews/MB) : ''ಮತ್ತೊಂದು ಪಕ್ಷದೊಂದಿಗೆ ವಿಲೀನ ಮಾಡಿಕೊಳ್ಳುವ ಮೂಲಕ ಸ್ವಯಂ ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ಬಂದಿಲ್ಲ, ಬರುವುದೂ ಇಲ್ಲ'' ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
''ಜೆಡಿಎಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ, ಜೆಡಿಎಸ್ ಬಿಜೆಪಿ ವಿಲೀನವಾಗುತ್ತದೆ'' ಎಂಬ ಸುದ್ದಿಗಳಿಗೆ ಸಂಬಂಧಿಸಿ ಸರಣಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಅವರು, ''ಸ್ವಾಭಿಮಾನಿ ಕನ್ನಡಿಗರ ಪಕ್ಷ ಜೆಡಿಎಸ್ ಎಂದಿಗೂ ವಿಲೀನದ ಆಲೋಚನೆ ಮಾಡುವುದಿಲ್ಲ. ಜನರ ಗಟ್ಟಿ ಧ್ವನಿಯಾದ ಜೆಡಿಎಸ್ ಅಂತಹ ಅವಿವೇಕತನ ಪ್ರದರ್ಶನ ಮಾಡುವುದಿಲ್ಲ. ಅಗತ್ಯವಿದ್ದಾಗ ವಿಷಯಾಧಾರಿತವಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ವಿಶ್ವಾಸಪೂರ್ವಕವಾಗಿ ನಡೆಯಬಹುದಷ್ಟೆ. ವಿಲೀನದಂಥ ಕಪೋಲಕಲ್ಪಿತ ಸುದ್ದಿಗಳಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
''ಜೆಡಿಎಸ್ ಬಿಜೆಪಿಯ 'ಬಿ ಟೀಂ' ಎಂದು ಟೀಕಿಸಿದ್ದ ಕಾಂಗ್ರೆಸ್ ಹೈಕಮಾಂಡ್ ನಮ್ಮ ಮನೆಬಾಗಿಲಿಗೆ ಬಂದು ಕಾಂಗ್ರೆಸ್ ಜೊತೆ ಸರ್ಕಾರ ರಚಿಸುವ ಆಹ್ವಾನ ನೀಡಿತ್ತು. ನಾವೇನಾದರೂ ಬಿಜೆಪಿಯ 'ಬಿ ಟೀಂ' ಆಗಿದ್ದರೆ, ಕಾಂಗ್ರೆಸ್ನೊಂದಿಗೆ ಸರ್ಕಾರವನ್ನೇ ಮಾಡುತ್ತಿರಲಿಲ್ಲ. ಅವರು ಹೇಳಿದಂತೆ ಒಳಒಪ್ಪಂದವೇನೂ ಇಲ್ಲ. ವಿಷಯಾಧಾರಿತ ಹೊಂದಾಣಿಕೆಯಷ್ಟೇ ಸಾಧ್ಯ'' ಎಂದು ತಿಳಿಸಿದ್ದಾರೆ.
'ರೈತರ ಸಾಲಮನ್ನಾ', 'ಬಡವರ ಬಂಧು' ಇಂತಹ ಕಾರ್ಯಕ್ರಮಗಳನ್ನು ನೀಡಿದ, ಶಿಸ್ತುಬದ್ಧ ಆಡಳಿತ ನಡೆಸಿದ, ದೇವೇಗೌಡರ ಆಶಯದಂತೆ ನಡೆಯುತ್ತಿರುವ ಜೆಡಿಎಸ್ ಮೇಲೆ ಜನರ ವಿಶ್ವಾಸವಿದೆ. ಮತ್ತೊಂದು ಪಕ್ಷದೊಂದಿಗೆ ವಿಲೀನ ಮಾಡಿಕೊಳ್ಳುವ ಮೂಲಕ ಸ್ವಯಂ ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ಬಂದಿಲ್ಲ, ಬರುವುದೂ ಇಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.