ಮುಂಬೈ, ಡಿ. 26 (DaijiworldNews/MB) : ರಿಪಬ್ಲಿಕ್ ಟಿವಿ ಒಳಸಂಚಿನಿಂದ ಅಗ್ರಸ್ಥಾನಕ್ಕೇರಿದೆ ಎಂದು ಮುಂಬೈ ಜಂಟಿ ಪೊಲೀಸ್ ಆಯುಕ್ತ ಮಿಲಿಂದ್ ಭರಂಬೆ ಹೇಳಿದ್ದಾರೆ. ಮುಂಬೈ ಪೊಲೀಸರು ಟಿಆರ್ಪಿ ಹಗರಣಕ್ಕೆ ಸಂಬಂಧಿಸಿ ಸ್ಪೋಟಕ ಮಾಹಿತಿ ನೀಡಿದ್ದಾರೆ. ಇಂಗ್ಲಿಷ್ ಚಾನಲ್ಗಳ ಪೈಕಿ ಒಂದನೇ ಸ್ಥಾನದಲ್ಲಿದ್ದ ಟೈಮ್ಸ್ ನೌ ವಾಹಿನಿಯನ್ನು ಉದ್ದೇಶಪೂರ್ವಕವಾಗಿ ಎರಡನೇ ಸ್ಥಾನಕ್ಕೆ ಇಳಿಸಿ ರಿಪಬ್ಲಿಕ್ ಟಿವಿಯನ್ನು ಮೊದಲ ಸ್ಥಾನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮುಂಬೈ ಜಂಟಿ ಪೊಲೀಸ್ ಆಯುಕ್ತ ಮಿಲಿಂದ್ ಭರಂಬೆ, ''ವಾಸ್ತವವಾಗಿ ಟೆಲೆವಿಜನ್ ರೇಟಿಂಗ್ ಪಾಯಿಂಟ್ (ಟಿಆರ್ಪಿ) ತಿರುಚಿ ರಿಪಬ್ಲಿಕ್ ಟಿವಿಯಯನ್ನು ಒಂದನೇ ಸ್ಥಾನದಲ್ಲಿಯಿದೆ ಎಂದು ಬಿಂಬಿಸಲಾಗಿದೆ. ಟೈಮ್ಸ್ ನೌ ಒಂದನೇ ಸ್ಥಾನದಲ್ಲಿತ್ತು. ಆದರೆ ಪ್ರಸಾರ ಪ್ರೇಕ್ಷಕ ಸಂಶೋಧನಾ ಮಂಡಳಿ ಟೈಮ್ಸ್ ನೌ ವಾಹಿನಿಯನ್ನು ಒಳಸಂಚು ನಡೆಸಿ ಎರಡನೇ ಸ್ಥಾನಕ್ಕೆ ಇಳಿಸಿದೆ. ಎರಡನೇ ಸ್ಥಾನದಲ್ಲಿದ್ದ ಸಿಎನ್ಎನ್- ನ್ಯೂಸ್ 18 ವಾಹಿನಿಯನ್ನು ಮೂರನೇ ಸ್ಥಾನಕ್ಕೆ ತಳ್ಳಲಾಗಿದೆ'' ಎಂದು ತಿಳಿಸಿದ್ದಾರೆ.
''ಈ ಅಂಶವು ಕಳೆದ ವರ್ಷದ ಜೂನ್ನಲ್ಲಿ ಬಿಎಆರ್ಸಿಯ ಅಂಕಿ ಅಂಶಗಳನ್ನು, ವಿಧಿವಿಜ್ಞಾನ ಪರಿಶೋಧನೆಗೆ ಒಳಪಡಿಸಿದಾಗ ತಿಳಿದು ಬಂದಿದೆ'' ಎಂದು ತಿಳಿಸಿರುವ ಅವರು, ''ಈ ಬಗ್ಗೆ ಅಕ್ಟೋಬರ್ 6ರಂದು ಎಫ್ಐಆರ್ ದಾಖಲಿಸಲಾಗಿದೆ. ಕೆಲ ತಿಂಗಳ ಹಿಂದೆ ತನಿಖೆ ಪ್ರಾರಂಭವಾಗಿದ್ದರೂ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ'' ಎಂದು ಆರೋಪಿಸಿದ್ದಾರೆ.
ಭಾರತದ ಟಿವಿ ಚಾನಲ್ಗಳ ವೀಕ್ಷಕರ ಸಂಖ್ಯೆಯನ್ನು ಬಿಎಆರ್ಸಿ ಅಳೆಯುತ್ತದೆ. ಅದನ್ನು ಟಿಆರ್ಪಿ ಎಂದು ಹೇಳಲಾಗುತ್ತದೆ. ಈ ಟಿಆರ್ಪಿಯು ಜಾಹೀರಾತು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.