ಕೊಚ್ಚಿ, ಡಿ.26 (DaijiworldNews/HR): ಮಲಯಾಳಂ ಖ್ಯಾತ ನಟ ಅನಿಲ್ ನೆಡುಂಗಾಡ್ ಅವರು ಶೂಟಿಂಗ್ ಬಿಡುವಿನ ವೇಳೆ ಮಲಂಕರ ಡ್ಯಾಂಗೆ ಸ್ನಾನ ಮಾಡಲು ಹೋದ ಸಂದರ್ಭದಲ್ಲಿ ಡ್ಯಾಂನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
'ಅಯ್ಯಪ್ಪನುಮ್ ಕೋಶಿಯಮ್' 'ಕಮತ್ತಿಪಾಡಮ್', 'ಪಾವಡ' ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದ ಅನಿಲ್ ನೆಡುಂಗಾಡ್ ಅವರು ಮುಂದಿನ ಚಿತ್ರದ ಶೂಟಿಂಗ್ನಲ್ಲಿ ತೊಡಗಿದ್ದರು.
ಇನ್ನು ಜೊಜು ಜಾರ್ಜ್ ಪ್ರಧಾನ ಪಾತ್ರದಲ್ಲಿರುವ ಈ ಚಿತ್ರದ ಶೂಟಿಂಗ್ ತೊಡುಪುಳದಲ್ಲಿ ನಡೆಯುತ್ತಿದ್ದು, ಶೂಟಿಂಗ್ ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ಅನಿಲ್ ನೆಡುಂಗಾಡ್ ಸ್ನಾನಕ್ಕೆಂದು ಡ್ಯಾಂಗೆ ತೆರಳಿದ್ದರು. ಸ್ನಾನ ಮಾಡುವಾಗ ನೀರಿನ ಹರಿವು ಹೆಚ್ಚಾಗಿ ಅನಿಲ್ ನೀರುಪಾಲಾಗಿದ್ದಾರೆಂದು ತಿಳಿದು ಬಂದಿದೆ.
ಅನಿಲ್ ನೆಡುಂಗಾಡ್ ಅವರ ಕೊನೆಯ ಚಿತ್ರ 'ಪಾಪಮ್ ಚೆಯ್ಯತವರ್ ಕಲ್ಲೆರಿಯತ್ತೆ' ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು.