ಶ್ರೀನಗರ, ಡಿ. 26 (DaijiworldNews/MB) : ಭದ್ರತಾ ಪಡೆ ಮತ್ತು ಉಗ್ರರ ನಡುವೆ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಡೆದಿದ್ದು ಅಪರಿಚಿತ ಉಗ್ರನನ್ನು ಭದ್ರತಾಪಡೆ ಹತ್ಯೆಗೈದಿದೆ. ಈ ವೇಳೆ ಇಬ್ಬರು ಯೋಧರಿಗೂ ಗಾಯವಾಗಿದೆ ಎಂದು ವರದಿಯಾಗಿದೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ನ ಕನಿಗಾಮ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಬಗ್ಗೆ ಭದ್ರತಾ ಪಡೆಗಗೆ ದೊರೆತ ಖಚಿತ ಮಾಹಿತಿ ಆಧಾರದಲ್ಲಿ ಭದ್ರತಾ ಪಡೆ ಶೋಧ ಕಾರ್ಯ ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು, ಮಾಹಿತಿ ಆಧಾರದಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆಯು ಕೂಡಾ ಪ್ರತಿದಾಳಿ ನಡೆಸಿದ್ದು ಓರ್ವ ಉಗ್ರ ಹತನಾಗಿದ್ದಾನೆ. ಹತ್ಯೆಯಾದವನ ಗುರುತು ಹಾಗೂ ಆತನ ಗುಂಪು ಯಾವುದೆಂಬ ಮಾಹಿತಿ ದೊರೆತಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಘಟನೆಯಲ್ಲಿ ಇಬ್ಬರು ಯೋಧರಿಗೂ ಗಾಯವಾಗಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.
ಪ್ರಸ್ತುತ ಕಾರ್ಯಾಚರಣೆ ನಡೆಯುತ್ತಲಿದೆ ಎಂದು ವರದಿ ತಿಳಿಸಿದೆ.