ಹೈದರಾಬಾದ್,ಡಿ.26 (DaijiworldNews/HR): ಆಪ್ ಮೂಲಕ ಸಾಲ ನೀಡಿ ಮರುಪಾವತಿಯ ವೇಳೆಗೆ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚೀನಾ ಪ್ರಜೆಯೊಬ್ಬರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದು, ಕಂಪನಿಯ ನಿರ್ದೇಶಕ ಚೀನಾ ಪ್ರಜೆ ಜಿಕ್ಸಿಯಾ ಜಾಂಗ್ ತಲೆಮರೆಸಿಕೊಂಡಿದ್ದಾರೆ.
11 ಆಪ್ಗಳನ್ನು ಸಿದ್ಧಪಡಿಸಿ ಈ ಕಂಪನಿ ತಕ್ಷಣದಲ್ಲೇ ಸಾಲ ಸಿಗುವ ಸೌಲಭ್ಯ ನೀಡುತ್ತಿದ್ದು,ಸಾಲ ಮರುಪಾವತಿ ವೇಳೆ ಹೆಚ್ಚಿನ ಬಡ್ಡಿದರ, ಜಿಎಸ್ಟಿ ಹಾಗೂ ವಿಳಂಬವಾದರೆ ಭಾರಿ ದಂಡ ವಿಧಿಸುತ್ತಿದ್ದು ಏಜೆಂಟ್ಗಳ ಮುಖಾಂತರ ಸಾಲ ಪಡೆದವರಿಗೆ ಕಿರುಕುಳ ನೀಡಿ ಅವಮಾನ ಮಾಡುತ್ತಿದ್ದರು. ಇದರ ಪರಿಣಾಮವಾಗಿ ಇತ್ತೀಚೆಗೆ ರಾಜ್ಯದಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದು, ಹೈದರಾಬಾದ್, ಸೈಬರಾಬಾದ್ ಹಾಗೂ ರಚಕೊಂಡ ಪ್ರದೇಶ ಸೇರಿದಂತೆ ತೆಲಂಗಾಣದಲ್ಲಿ 12ಕ್ಕೂ ಅಧಿಕ ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ.
ಇನ್ನು ಸೈಬರಾಬಾದ್ ಪೊಲೀಸರು ಶಾಂಗೈ ನಿವಾಸಿ ಯಿ ಬೈ ಅಲಿಯಾಸ್ ಡೆನಿಸ್, ರಾಜಸ್ಥಾನದ ಸತ್ಯಪಾಲ್ ಖಾಯಾಲಿಯಾ ಹಾಗೂ ಅನಿರುದ್ಧ್ ಮಲ್ಹೋತ್ರ ಮತ್ತು ಕಡಪದ ಮುರಥೋಟಿ ರಿಚಿ ಎಂಬುವವರನ್ನು ಬಂಧಿಸಿದ್ದಾರೆ.