ಬೆಂಗಳೂರು, ಡಿ.26 (DaijiworldNews/HR): ಭಾರತ್ ಬಯೋಟೆಕ್ನ ಕೊರೊನಾ ಲಸಿಕೆ ಕೊವ್ಯಾಕ್ಸಿನ್ನ ಮೂರನೇ ಹಂತದ ಪ್ರಯೋಗದಲ್ಲಿ ಕರ್ನಾಟಕದ 14 ಮಂದಿ ಜನಪ್ರತಿನಿಧಿಗಳು, 98 ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಲಸಿಕೆ ಪಡೆದಿದ್ದು, ನಾವು ಲಸಿಕೆ ಪಡೆದಿದ್ದೇವೆ, ನೀವೂ ಪಡೆಯಿರಿ ಎಂದು ಜನರಲ್ಲಿ ಲಸಿಕೆಯ ಬಗ್ಗೆ ವಿಶ್ವಾಸ ಮೂಡಿಸಿದ್ದಾರೆ.
"ವೈದೇಹಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಸಂಸ್ಥೆಯಲ್ಲಿ 3ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದ್ದು,382 ಮಂದಿಗೆ ಕೊವ್ಯಾಕ್ಸಿನ್ನ ಎರಡು ಡೋಸ್ಗಳನ್ನು ಯಶಸ್ವಿಯಾಗಿ ನೀಡಲಾಗಿದೆ. ಲಸಿಕೆ ಪಡೆದವರಲ್ಲಿ ಈವರೆಗೂ ಯಾವುದೇ ಸಮಸ್ಯೆ ಉಂಟಾಗಲಿಲ್ಲ" ಎಂದು ಕ್ಲಿನ್ಟ್ರಾಕ್ ಇಂಟರ್ನ್ಯಾಷನಲ್ ಪ್ರೈ.ಲಿ. ನಿರ್ದೇಶಕಿ ಚೈತನ್ಯಾ ಆದಿಕೇಶವುಲು ಹೇಳಿದ್ದಾರೆ.
ಇನ್ನು ಬೆಳಗಾವಿಯ ಜೀವನರೇಖಾ ಆಸ್ಪತ್ರೆಯಲ್ಲಿ 1,100 ಜನರ ಮೇಲೆ ಪ್ರಯೋಗ ನಡೆಸಲಾಗಿದ್ದು, ಇದುವರೆಗೆ ಯಾರ ಆರೋಗ್ಯದಲ್ಲಿಯೂ ಸಮಸ್ಯೆ ಉಂಟಾಗಿಲ್ಲ. ಪ್ರತೀ ದಿನ ಸುಮಾರು 70ರಿಂದ 80 ಜನರು ಬರುತ್ತಿದ್ದಾರೆ ಅವರಲ್ಲಿ ರಾಜಕೀಯ ಮುಖಂಡರು, ಕಾರ್ಯಕರ್ತರು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಮಾಜ ಸೇವಾ ಕಾರ್ಯಕರ್ತರು ಸೇರಿದ್ದಾರೆ ಎಂದು ಆಸ್ಪತ್ರೆ ನಿರ್ದೇಶಕ ಡಾ. ಅಮಿತ್ ಭಾತೆ ತಿಳಿಸಿದ್ದಾರೆ.