ಫಂಗ್ವಾರ, ಡಿ. 26 (DaijiworldNews/MB) : ಬಿಜೆಪಿ ಮುಖಂಡರಿದ್ದ ಹೋಟೆಲ್ ಬಳಿ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಜಮಾವಣೆಯಾದ ಕಾರಣ ಭಯಗೊಂಡ ಬಿಜೆಪಿ ಮುಖಂಡರು ಪೊಲೀಸ್ ಭದ್ರತೆಯಲ್ಲಿ ಹಿಂಬಾಗಿಲಿನಿಂದ ಓಡಿಹೋದ ಘಟನೆ ಪಂಜಾಬ್ನ ಫಂಗ್ವಾರದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಶುಕ್ರವಾರ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವಾದ ಹಿನ್ನೆಲೆ ಬಿಜೆಪಿ ಮುಖಂಡರು ಹೋಟೆಲ್ನಲ್ಲಿ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಹೊಟೇಲ್ನ ಹೊರಗಡೆ ಭಾರ್ತಿ ಕಿಸಾನ್ ಯೂನಿಯನ್ ಸದಸ್ಯರು ಘೋಷಣೆಗಳನ್ನು ಕೂಗಿದರು.
ಇನ್ನು ಬಿಜೆಪಿ ಮುಖಂಡರು ರೈತರ ಹೋಟೆಲ್ ಬಳಿಗೆ ಬರುವ ಮುನ್ನವೇ ತಾವು ಹೋಟೆಲ್ ಒಳಕ್ಕೆ ತೆರಳಿದ್ದರು. ಬಳಿಕ ಪ್ರತಿಭಟನೆ ಆರಂಭವಾಗಿದೆ ಎಂದು ವರದಿಯಾಗಿದೆ.
ಪ್ರತಿಭಟನೆ ಆರಂಭವಾದ ಬಳಿಕ ರೈತರು ಬಿಜೆಪಿಯ ಜಿಲ್ಲಾಧ್ಯಕ್ಷ ಭಾರತಿ ಶರ್ಮಾ ಸೇರಿದಂತೆ ಯಾರೊಬ್ಬರನ್ನೂ ಹೋಟೆಲ್ ಒಳಗಡೆ ತೆರಳಲು ಬಿಟ್ಟಿಲ್ಲ. ಈ ಹಿನ್ನೆಲೆ ಇದಕ್ಕೂ ಮೊದಲೇ ಹೋಟೆಲ್ ಒಳಗಡೆ ತೆರಳಿದ್ದವರು ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಪೊಲೀಸ್ ರಕ್ಷಣೆಯೊಂದಿಗೆ ಹೊಟೇಲ್ನ ಹಿಂಬಾಗಿಲಿನಿಂದ ಒಬ್ಬೊಬ್ಬರಾಗಿ ತೆರಳಿದರು ಎಂದು ವರದಿಯಾಗಿದೆ.
''ಈ ಹೋಟೆಲ್ ಬಿಜೆಪಿ ಕಾರ್ಯಕರ್ತನದ್ದು ಎಂದು ಹೇಳಿರುವ ಪ್ರತಿಭಟನಾನಿರತ ರೈತರು, ಆ ವ್ಯಕ್ತಿ ಜಾನುವಾರು ಮತ್ತು ಕೋಳಿ ಆಹಾರ ಪೂರೈಸುವ ಕಂಪನಿ ಹೊಂದಿದ್ದಾನೆ. ನಾವಿನ್ನು ಮುಂದೆ ಆ ಕಂಪನಿಯ ಉತ್ಪನ್ನ ಬಿಹಿಷ್ಕಾರ ಮಾಡುತ್ತೇವೆ'' ಎಂದು ತಿಳಿಸಿದ್ದಾರೆ.