ಬೆಂಗಳೂರು, ಡಿ.25 (DaijiworldNews/HR): ರಾತ್ರಿ ಕರ್ಫ್ಯೂ ನಿರ್ಧಾರವನ್ನು ಜಾರಿಗೊಳಿಸುವಾಗ ಬಹಳ ವಿವೇಚನೆಯಿಂದಲೇ ಕೈಗೊಳ್ಳಲಾಗಿತ್ತು, ಅದೇನೂ ರಾಜಕೀಯ ನಿರ್ಧಾರವಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದಕ್ಕಾಗಿ ಮಾಧ್ಯಮಗಳಲ್ಲಿ ಎಡಬಿಡಂಗಿ ಸರ್ಕಾರ ಎನ್ನಲಾಗಿದೆ, ಆದರೆ ಇದೇ ನಮ್ಮ ಸರ್ಕಾರ ಉತ್ತಮವಾದ ನಿರ್ಧಾರಗಳಿಂದ ಕೊರೊನಾ ನಿಯಂತ್ರಣಕ್ಕೆ ತಂದಿದ್ದು ಸೋಂಕಿಗೊಳಗಾದವರಲ್ಲಿ 97.5% ರಷ್ಟು ಮಂದಿ ಗುಣಮುಖರಾಗಿದ್ದು ಸಾವಿನ ಪ್ರಮಾಣ 1.22% ಗೆ ಇಳಿಕೆಯಾಗಿದೆ" ಎಂದರು.
ಇನ್ನು "ಯು.ಕೆ ಹಾಗೂ ಜರ್ಮನಿಯಲ್ಲಿ ರಾತ್ರಿ ಕರ್ಫ್ಯೂ ಆಗಿದೆ ಹಾಗೆಂದು ಅಲ್ಲಿ ಇರುವವರಿಗೆ ಬುದ್ಧಿ ಇಲ್ಲ ಎಂದರ್ಥವಲ್ಲ. ನಮ್ಮ ಸರ್ಕಾರ ಯಾವುದೇ ರಾಜಕೀಯ ತೀರ್ಮಾನ ಕೈಗೊಂಡಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಅನುಭವ ಇದ್ದವರೊಂದಿಗೆ ಚರ್ಚಿಸಿ ಪ್ರತಿಯೊಂದು ತೀರ್ಮಾನ ತೆಗೆದುಕೊಳ್ಳಲಾಗಿತ್ತು" ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರಕ್ಕೆ ಆರ್ಥಿಕ ಚಟುವಟಿಕೆಯನ್ನು ಬಂದ್ ಮಾಡಿದಾಗ ನಷ್ಟವಾಗುತ್ತದೆ, ಆದರೂ ಜನರ ಆರೋಗ್ಯಕ್ಕಾಗಿ ಕೆಲ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.