ಬೆಂಗಳೂರು, 25 (DaijiworldNews/MB) : ರಾತ್ರಿ ಕರ್ಫ್ಯೂನಂತಹ ಪ್ಲಾನ್ ನೀಡುವ ವ್ಯಕ್ತಿಯ ಹೆಸರನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಆ ವ್ಯಕ್ತಿಯ ಫೋಟೋ ತೆಗೆದು ಮನೆಯಲ್ಲಿರಿಸಲು ಬಯಸುತ್ತೇನೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಡಿಸೆಂಬರ್ 25 ಶುಕ್ರವಾರ ಮಾತನಾಡಿದ ಶಿವಕುಮಾರ್ ಅವರು, ''ಆರೋಗ್ಯ ಸಚಿವ ಸುಧಾಕರ್ ಬಗ್ಗೆ ಚಿಂತಿಸುತ್ತಿಲ್ಲ ಆದರೆ ಬಿ ಎಸ್ ಯಡಿಯೂರಪ್ಪ ಏಕೆ ದುರ್ಬಲರಾಗಿದ್ದಾರೆ'' ಎಂದು ಆಶ್ಚರ್ಯ ಸೂಚಿಸಿದರು.
"ಯಾರೊಂದಿಗೂ ಚರ್ಚಿಸದೆ ರಾತ್ರಿ ಕರ್ಫ್ಯೂ ಕಲ್ಪನೆಯ ಘೋಷನೆ ಮಾಡಲಾಗಿದೆ. ಅಂತಹ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾಮಾನ್ಯ ಪರಿಜ್ಞಾನವಾದರೂ ಇರಬೇಕು. ಇದು ಈ ಸಾಮಾನ್ಯ ಪರಿಜ್ಞಾನವೂ ಇಲ್ಲದವರು ತೆಗೆದುಕೊಂಡ ನಿರ್ಧಾರ" ಎಂದು ಟೀಕಿಸಿದರು.
"ಈ ರಾತ್ರಿ ಕರ್ಫ್ಯೂ ಅನ್ನು ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ ಸದಸ್ಯರೇ ವಿರೋಧಿಸಿದ್ದರು. ಅದಕ್ಕೆ ಅದನ್ನು ವಾಪಾಸ್ ಪಡೆಯಲಾಯಿತು. ಇದು ನಮ್ಮ ರಾಜ್ಯದ ಗೌರವದ ಪ್ರಶ್ನೆ. ಹಗಲಿನಲ್ಲಿ ತಿರುಗಾಡುವ ಜನರು ವೈರಸ್ ಹರಡುವುದಿಲ್ಲ ಆದರೆ ರಾತ್ರಿಯಲ್ಲಿ ಸೋಂಕು ಹರಡುತ್ತದೆ ಎಂದು ನಾವು ಹೇಗೆ ನಂಬಬಹುದು" ಎಂದು ಸರ್ಕಾರವನ್ನು ವ್ಯಂಗ್ಯವಾಡಿದರು.
''ಸರ್ಕಾರವು ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಕೊರೊನಾದಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲಿ. ಅವರು ಉದ್ಯಮಿಗಳಿಗೆ ತೆರಿಗೆ ವಿನಾಯತಿ ನೀಡಿಲ್ಲ ಅಥವಾ ಬಡ್ಡಿ ಮನ್ನಾ ಮಾಡಿಲ್ಲ. ಹೊಟೇಲ್ಗಳಿಗೆ ತಮ್ಮ ಮೊದಲ ವ್ಯವಹಾರದ ಶೇ. 40 ರಷ್ಟು ಕೂಡಾ ವ್ಯವಹಾರವಾಗುತ್ತಿಲ್ಲ. ಈ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡರು, ಒಮ್ಮೆಲೇ ಯೂಟರ್ನ್ ಹೊಡೆಯುತ್ತೆ. ಇದು ಎಷ್ಟು ಬಾರಿ ನಡೆದಿದೆ ಎಂದು ಜನರು ತಿಳಿದಿದ್ದಾರೆ'' ಎಂದು ಹೇಳಿದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ''ಅನೇಕ ಜನರು ಜಾಮೀನಿನ ಮೇಲೆ ಹೊರಬರುವುದನ್ನು ನೋಡಿದ್ದೇನೆ ಹಾಗೂ ಸಮಯವು ಎಲ್ಲವನ್ನೂ ನಿರ್ಣಯಿಸುತ್ತದೆ'' ಎಂದರು.