ಬೆಂಗಳೂರು, 25 (DaijiworldNews/MB) : ''ಉನ್ನತ ಶಿಕ್ಷಣದಲ್ಲಿ ಇನ್ನಷ್ಟು ಗುಣಮಟ್ಟ ಹಾಗೂ ಜಾಗತಿಕ ಸ್ಪರ್ಧಾತ್ಮಕತೆಗೆ ತೆರೆದುಕೊಳ್ಳಲು ಖಾಸಗಿ ಹಾಗೂ ಸಾರ್ವಜನಿಕ ಸ್ವಾಮ್ಯದ ಎಂಜಿನಿಯರಿಂಗ್, ಡಿಪ್ಲೊಮೋ, ಪದವಿ ಶಿಕ್ಷಣ ಸಂಸ್ಥೆಗಳಿಗೆ ಪೂರ್ಣ ಸ್ವಾಯತ್ತತೆ ನೀಡಲು ರಾಜ್ಯ ಸರಕಾರ ಸಿದ್ಧವಿದೆ'' ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಅಂಗವಾಗಿ ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಉತ್ತಮ ಆಡಳಿತ ದಿನ (ಗುಡ್ ಗವರ್ನೆನ್ಸ್ ಡೇ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
''ನಮ್ಮ ವೈಯಕ್ತಿಕ ಸಮಸ್ಯೆ, ಸಾಮಾಜಿಕ ಸವಾಲು ಎದುರಿಸಲು ಶಿಕ್ಷಣವೇ ನಮಗೆ ರಾಜಮಾರ್ಗ. ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು ಶಿಕ್ಷಣ ಎಂಬುದು ನನ್ನ ನಂಬಿಕೆ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತರಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ, ರಚನಾತ್ಮಕ ಸ್ವಾಯತ್ತತೆ ನೀಡಲಾಗುತ್ತದೆ. ಸರ್ಕಾರವು ಈ ದಾರಿಯಲ್ಲೇ ಮುನ್ನಡೆಯುತ್ತದೆ'' ಎಂದು ಹೇಳಿದರು.
''ಸರ್ಕಾರವೇ ಎಲ್ಲವನ್ನು ತನ್ನ ವಶದಲ್ಲಿ ಇರಿಸಿಕೊಂಡು ನಿರ್ವಹಿಸಲಾಗದು. ಅಟಲ್ ಬಿಹಾರಿ ವಾಜಪೇಯಿ ಅವರ ದೂರದೃಷ್ಟಿ, ಆಶಯ ಮತ್ತು ಆಡಳಿತದಂತೆಯೇ ಸರ್ಕಾರಿ ಹಾಗೂ ಖಾಸಗಿ ಸಹಕಾರದೊಂದಿಗೆ ನಾವು ಯಾವ ಅದ್ಭುತವನ್ನು ಬೇಕಾದರೂ ಸೃಷ್ಟಿಸಬಹುದು'' ಎಂದು ಹೇಳಿದರು.
''ಇನ್ನು ಉನ್ನತ ಶಿಕ್ಷಣದಲ್ಲಿ ವಿವಿಧ ಬಗೆಯ ಸಂಸ್ಥೆಗಳಿಗೆ ಸ್ವಾಯತತ್ತೆ ಎಂಬ ಶಕ್ತಿ ನೀಡಲು ಸರ್ಕಾರ ಬದ್ದ. ಇವೆಲ್ಲವುದಕ್ಕೂ ನಮಗೆ ಅಟಲ್ ಜೀ ಸ್ಪೂರ್ತಿ'' ಎಂದು ಹೇಳಿದರು.