ನವದೆಹಲಿ, ಡಿ.25 (DaijiworldNews/PY): "ರೈತರು ಪ್ರತಿಭಟನೆಯನ್ನು ಕೈಬಿಟ್ಟು ಮಾತುಕತೆಗೆ ಬರಬೇಕು. ಹೊಸ ಕೃಷಿ ಕಾಯ್ದೆಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ದ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ರೈತರಲ್ಲಿ ಮನವಿ ಮಾಡಿದರು.
ದ್ವಾರಕಾದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದ ಅವರು, "ಸ್ವತಃ ನಾನು ಕೂಡಾ ಓರ್ವ ರೈತನ ಪುತ್ರ. ನನಗೂ ಕೂಡಾ ರೈತರ ಕಷ್ಟ ತಿಳಿದಿದೆ. ಮೋದಿ ನೇತೃತ್ವದ ಸರ್ಕಾರ ರೈತರ ಹಿತಾಸಕ್ತಿಗೆ ಧಕ್ಕೆಯುಂಟುಮಾಡುವ ಯಾವ ಕ್ರಮವನ್ನೂ ಕೂಡಾ ಕೈಗೊಳ್ಳುವುದಿಲ್ಲ" ಎಂದರು.
"ರೈತರ ಹಿತಾಸಕ್ತಿಗೆ ಕಾಯ್ದೆಗೆ ತಂದಿರುವ ತಿದ್ದುಪಡಿಗಳು ನೆರವಾಗಬಲ್ಲವು ಎನ್ನುವ ವಿಚಾರ ಮನವರಿಕೆ ಆಗಿದ್ದೇ ಆದಲ್ಲಿ, ಸರ್ಕಾರ ಆ ಕಾರ್ಯವನ್ನು ಮಾಡಲು ಸಹ ಸಿದ್ದ" ಎಂದು ತಿಳಿಸಿದರು.
"ಹೊಸ ಕೃಷಿ ಕಾಯ್ದೆಗಳನ್ನು 1-2 ವರ್ಷಗಳ ಅವಧಿಗಾಗಿ ಪ್ರಾಯೋಗಿಕವಾಗಿ ಅನುಷ್ಠಾಗೊಳಿಸಲಾಗುವುದು. ಕೃಷಿ ಉತ್ಪನ್ನಗಳನ್ನು ಈ ಕಾಯ್ದೆಗಳ ಪ್ರಕಾರ ಮಾರಾಟ ಮಾಡಿ. ಇದರಿಂದ ನಿಮಗೆ ಲಾಭವಾಗದಿದ್ದಲ್ಲಿ, ಸರ್ಕಾರ ಈ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತರಲು ಸಿದ್ದವಿದೆ" ಎಂದರು.