ಕೋಲ್ಕತ್ತ, ಡಿ.25 (DaijiworldNews/PY): "ಬಿಜೆಪಿ ಸೇರ್ಪಡೆಗೊಳ್ಳಲು ನಾನು ಸರಿಯಾದ ತೀರ್ಮಾನವನ್ನೇ ಕೈಗೊಂಡಿದ್ದೇನೆ" ಎಂದು ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಗುಡ್ಬೈ ಹೇಳಿ ಬಿಜೆಪಿ ಪಕ್ಷಕ್ಕೆ ಸೇರ್ಪಗೊಂಡಿರುವ ಮಾಜಿ ಶಾಸಕ ಸುವೇಂದು ಅಧಿಕಾರಿ ಹೇಳಿದ್ದಾರೆ.
ಕಾಂತಿಯಲ್ಲಿ ಬೃಹತ್ ರೋಡ್ ಶೋ ಉದ್ದೇಶಿಸಿ ಮಾತನಾಡಿದ ಅವರು, "ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿದ ನಂತರವೇ ನಾನು ನಿದ್ರಿಸುವುದು. ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ನಾನು ಸೂಕ್ತವಾದ ತೀರ್ಮಾನವನ್ನೇ ತೆಗೆದುಕೊಂಡಿದ್ದೇನೆ. ಇದಕ್ಕೆ ಜನರ ಅನುಮೋದನೆಯೂ ಸಿಕ್ಕಿದೆ. ನಾನು ಸೂಕ್ತವಾದ ತೀರ್ಮಾನ ಕೈಗೊಂಡಿದ್ದೇನೆ ಎನ್ನುವ ವಿಚಾರಕ್ಕೆ ಈ ರೋಡ್ ಶೋಗಳೇ ಸಾಕ್ಷಿ" ಎಂದಿದ್ದಾರೆ.
"ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಸಮಾನವಾಗಿ ಜ.8ರಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತೇನೆ. ಜ.7ರಂದು ನಂದಿಗ್ರಾಮಕ್ಕೆ ಮಮತಾ ಬ್ಯಾನರ್ಜಿ ಅವರನ್ನು ಸ್ವಾಗತಿಸುತ್ತೇನೆ. ನಂದಿಗ್ರಾಮದಲ್ಲಿ ಅವರು ಏನು ಹೇಳುತ್ತಾರೋ. ಆ ಎಲ್ಲಾ ವಿಚಾರಗಳಿಗೂ ನಾನು ಸರಿಯಾದ ಪ್ರತ್ಯುತ್ತರ ಕೊಡಲಿದ್ದೇನೆ" ಎಂದು ತಿಳಿಸಿದ್ದಾರೆ.