ಕೊಚ್ಚಿ, ಡಿ.25 (DaijiworldNews/PY): ಕಳೆದ ಕೆಲ ವರ್ಷಗಳಿಂದ ಕೇರಳ ಮೂಲದ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ಯಾಂಕ್ ಖಾತೆಗಳಿಗೆ 100 ಕೋಟಿ. ರೂ.ಗೂ ಹೆಚ್ಚು ಹಣ ಜಮೆ ಆಗಿರುವುದು ಪತ್ತೆಯಾಗಿದೆ ಎಂದು ಇಲ್ಲಿನ ನ್ಯಾಯಾಲಯವೊಂದಕ್ಕೆ ಜಾರಿ ನಿರ್ದೇಶನಾಲಯ ತಿಳಿಸಿದೆ.
ಬ್ಯಾಂಕ್ ಖಾತೆಗಳಿಗೆ ಜಮೆಯಾದ ಹಣ ಮೂಲ ಹಾಗೂ ಅದನ್ನು ಯಾವು ಉದ್ದೇಶಕ್ಕಾಗಿ ಬಳಕೆ ಮಾಡಲಾಗಿದೆ ಎನ್ನುವ ವಿಚಾರದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಣದಲ್ಲಿ ಬಹುಪಾಲು ನಗದು ಮುಖೇನವೇ ಜಮೆ ಆಗಿದೆ. 2013ರಲ್ಲಿ ಪಿಎಫ್ಐ ಸಂಘಟಿತ ಅಪರಾಧಗಳಲ್ಲಿ ಪಾಲ್ಗೊಳ್ಳುತ್ತಿತ್ತು. ಹಣ ವರ್ಗಾವಣೆ ಹಾಗೂ ಜಮೆ 2014ರ ಬಳಿಕ ಹೆಚ್ಚಾಗಿದೆ. ತನಿಖೆಯ ಸಂದರ್ಭ ಪಿಎಫ್ಐ ಸಿಎಎ ವಿರೋಧಿ ಪ್ರತಿಭಟನೆಗಳಲ್ಲೂ ಕೂಡಾ ಪಾಲ್ಗೊಂಡಿರುವುದು ತಿಳಿದುಬಂದಿದೆ. ಈ ಹಣವನ್ನು 2019 ಡಿಸೆಂಬರ್ನಿಂದ 2020ರ ಫೆಬ್ರುವರಿ ತನಕ ಪ್ರತಿಭಟನೆಗೆ ಹಣಕಾಸು ನೆರವು ನೀಡಲು ಉಪಯೋಗ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಅಫಿಡವಿಟ್ನಲ್ಲಿ ಉಲ್ಲೇಖವಾಗಿದೆ.
ತನಿಖೆಯ ಸಂದರ್ಭ ದೆಹಲಿಯಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆದ ಗಲಭೆಯಲ್ಲಿಯೂ ಕೂಡಾ ಪಿಎಫ್ಐ ಪಾತ್ರ ವಹಿಸಿದ್ದು ಹಾಗೂ ಪಿಎಫ್ಐ ಯ ಕಾರ್ಯಕರ್ತರೂ ಕೂಡಾ ಪಾಲ್ಗೊಂಡಿರುವು ವಿಚಾರ ತಿಳಿದುಬಂದಿದೆ. ಬೆಂಗಳೂರಿನ ಗಲಭೆಯಲ್ಲೂ ಕೂಡಾ ಪಿಎಫ್ಐಯ ಪಾತ್ರವಿರುವ ಲಕ್ಷಣವಿದೆ. ಪಿಎಫ್ಐ ರಾಜಕೀಯ ಘಟಕ, ಎಸ್ಡಿಪಿಐ ಸಹ ಈ ಗಲಭೆಯಲ್ಲಿ ಪಾಲ್ಗೊಂಡಿರುವುದು ಪತ್ತೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ಪಿಎಫ್ಐ ವಿದ್ಯಾರ್ಥಿ ಘಟಕದ ನಾಯಕ ಕೆ.ಎ.ರವೂಫ್ ಶರೀಫ್ ಕಸ್ಟಡಿಯನ್ನು ವಿಸ್ತರಿಸಲು ಕೋರಿ, ಜಾರಿ ನಿರ್ದೇಶನಾಯಲವು ಹಣ ಅಕ್ರಮ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತು. ನ್ಯಾಯಾಲಯವು ಇ.ಡಿ ಅರ್ಜಿಯನ್ನು ಪುರಸ್ಕರಿಸಿದ್ದು, ರವೂಫ್ ಶರೀಫ್ ಕಸ್ಟಡಿಯನ್ನು ಮೂರು ದಿನಕ್ಕೆ ವಿಸ್ತರಣೆ ಮಾಡಿದೆ.