ನವದೆಹಲಿ, ಡಿ.25 (DaijiworldNews/PY): ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯ ಸಂದರ್ಭ ಅವರನ್ನು ಹಲವಾರು ನಾಯಕರು ಸ್ಮರಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಾಲಾ ಸೀತಾರಾಮನ್ ಹಾಗೂ ಪಿಯೂಷ್ ಗೋಯಲ್ ಅವರು ದೆಹಲಿಯ ಅಟಲ್ ಸಮಾದಿ ಸದೈವ್ ಅಟಲ್ಗೆ ತೆರಳಿ ಗೌರವ ನಮನ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಮಾಜಿ ಪ್ರಧಾನಿ ಪೂಜ್ಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯಂದು ಅವರಿಗೆ ನಮಸ್ಕಾರಗಳು. ವಾಜಪೇಯಿ ಅವರ ದೂರದೃಷ್ಠಿಯ ನಾಯಕತ್ವದಲ್ಲಿ ದೇಶವನ್ನು ಅಭೂತಪೂರ್ವ ಅಭಿವೃದ್ಧಿಯ ಎತ್ತರಕ್ಕೆ ಕೊಂಡೊಯ್ದಿದ್ದರು. ಬಲಿಷ್ಠ ಹಾಗೂ ಸಮೃದ್ಧ ದೇಶದ ನಿರ್ಮಾಣಕ್ಕೆ ಅವರು ಮಾಡಿದ ಪ್ರಯತ್ನಗಳು ಯಾವಾಗಲೂ ನೆನಪಿನಲ್ಲಿರುತ್ತವೆ" ಎಂದಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದು, "ಅಪ್ರತಿಮ ಸಂಸದೀಯ ಪಟು, ಕವಿಹೃದಯದ ನಾಯಕ, ಮುತ್ಸದ್ಧಿ, ಅಜಾತಶತೃ, ಜನನಾಯಕ, ನನ್ನ ಮಾರ್ಗದರ್ಶಕರಾದ ಮಾಜಿ ಪ್ರಧಾನಮಂತ್ರಿ ಭಾರತರತ್ನ ದಿ. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜಯಂತಿಯಂದು ಅವರಿಗೆ ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಸರಿಸಾಟಿಯಿಲ್ಲದ ಅವರ ವ್ಯಕ್ತಿತ್ವ, ಆಡಳಿತ ಮತ್ತು ದೇಶಸೇವೆಗಳು ನಮಗೆ ನಿರಂತರ ಪ್ರೇರಣೆ ನೀಡುತ್ತಿವೆ" ಎಂದು ತಿಳಿಸಿದ್ದಾರೆ.